ಘಟಪ್ರಭಾ: ಇಲ್ಲಿನ ಡಾ.ಎನ್.ಎಸ್. ಹರ್ಡೀಕರ್ ರಾಷ್ಟ್ರೀಯ ಸೇವಾದಳ ಕೇಂದ್ರದ ಆವರಣದಲ್ಲಿ ಇಂದು 75ನೇ ಸ್ವಾತಂತ್ರ್ಯೋತ್ಸವವನ್ನು ಸಡಗರ, ಸಂಭ್ರಮದಿಂದ ಆಚರಿಸಲಾಯಿತು.
ರಾಷ್ಟ್ರೀಯ ಸೇವಾದಳದ ಉಪಾಧ್ಯಕ್ಷ ಬಲಾರಮ್ ಸಿಂಗ್ ಬದೌರಿಯಾ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಇಂದು ನಾವು 75ನೇ ಸ್ವಾತಂತ್ರ್ಯೋತ್ಸವದ ಹೊಸ್ತಿಲಲ್ಲಿದ್ದೇವೆ. ಈ ಸಂದರ್ಭದಲ್ಲಿ ನಾವು ದೇಶಕ್ಕಾಗಿ ಹೋರಾಡಿದ ಪ್ರತಿಯೊಬ್ಬ ಹೋರಾಟಗಾರರನ್ನು ನೆನೆಯಬೇಕಾಗಿದೆ ಎಂದು ಹೇಳಿದರು.
ಸ್ವಾತಂತ್ರ್ಯ ಹೋರಾಟದಲ್ಲಿ ಸೇವಾದಳವು ಪ್ರಮುಖ ಪಾತ್ರ ವಹಿಸಿತ್ತು: ಸತೀಶ ಜಾರಕಿಹೊಳಿ
ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ಸ್ವಾತಂತ್ರ್ಯ ಹೋರಾಟದಲ್ಲಿ ಸೇವಾದಳವು ಪ್ರಮುಖ ಪಾತ್ರ ವಹಿಸಿತ್ತು. ಸೇವಾದಳದ ನೇತೃತ್ವದಲ್ಲಿ ಅನೇಕ ಯುವಕರು ಹೋರಾಟಕ್ಕೆ ದುಮುಕಿದ್ದರು ಎಂದು ಸ್ಮರಿಸಿದರು.
ಸ್ವಾತಂತ್ರ್ಯದ ನಂತರ ದೇಶ ಕೋಮುವಾದದಿಂದ ನಲುಗಿತ್ತು. ಈಗಲೂ ಕೂಡ ಅನೇಕ ಯುವಕರು ಕೋಮುವಾದಕ್ಕೆ ಬಲಿಯಾಗುತ್ತಿದ್ದಾರೆ. ಯುವಕರಿಗೆ ನಿಜವಾದ ಸ್ವಾತಂತ್ರ್ಯದ ಅರಿವನ್ನು ಮೂಡಿಸಿ, ಪ್ರೀತಿ, ಸಹಬಾಳ್ವೆ, ಸಹೋದರತ್ವದಿಂದ ಬದುಕುವುದನ್ನು ನಾವೆಲ್ಲರೂ ಕಲಿಸಬೇಕಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸ್ವಾತಂತ್ರ್ಯ ಹೋರಾಟದ ಕುರಿತು ಎಲ್ಲ ಮಕ್ಕಳು, ಯುವಕರು ತಿಳಿದುಕೊಳ್ಳಬೇಕು. ದೇಶದ ಅಭಿವೃದ್ಧಿಗಾಗಿ ಪ್ರತಿಯೊಬ್ಬರು ಕೈಜೋಡಿಸಬೇಕು. ಯುವಕರು ಎಲ್ಲ ಕ್ಷೇತ್ರಗಳಲ್ಲೂ ಭಾಗವಹಿಸಿ ಸಾಧನೆಗೆ ಮುಂದಾಗಬೇಕು ಎಂದು ಕರೆ ನೀಡಿದರು.
ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ರವೀಂದ್ರ ನಾಯ್ಕರ್, ಮುಖಂಡರಾದ ವೀರಕುಮಾರ ಪಾಟೀಲ, ವಿ.ತುಳಸಿಗೇರಿ, ಕಲ್ಪನಾ ಜೋಶಿ, ದೇಶಿಂಗೆ, ಮಹಾಲಿಂಗಪ್ಪ ಅಲಬಾಳ ಸೇರಿ ಇನ್ನಿತರರು ಇದ್ದರು.