ಯಮಕನಮರಡಿ ಮತಕ್ಷೇತ್ರದ ವಿವಿಧ ಶಾಲೆಗಳಲ್ಲಿ 93 ಕೊಠಡಿಗಳ ನಿರ್ಮಾಣ; 2 ಕೋಟಿ ರೂ. ವೆಚ್ಚದಲ್ಲಿ ಶಾಲಾ ಕೊಠಡಿಗಳ ದುರಸ್ತಿ
ಯಮಕನಮರಡಿ: ಶಾಸಕ ಸತೀಶ ಜಾರಕಿಹೊಳಿ ಅವರು ದಡ್ಡಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಬೆನಕನಹೊಳಿ, ನರಸಿಂಗಪೂರ, ದಡ್ಡಿ ಗುಡಗನಟ್ಟಿ ಹಾಗೂ ಬಿದರೆವಾಡಿ ಗ್ರಾಮಗಳ ಸರ್ಕಾರಿ ಶಾಲೆಗಳಲ್ಲಿ ಇಂದು ನೂತನ ಕಟ್ಟಡ ಹಾಗೂ ಕೊಠಡಿಗಳನ್ನು ಉದ್ಘಾಟಿಸಿದರು.
ನಂತರ ಮಾನಗಾಂವ ಗ್ರಾಮದಲ್ಲಿ ನೂತನ ಅಂಗನವಾಡಿ ಕಟ್ಟಡವನ್ನು ಉದ್ಘಾಟನೆ ಮಾಡಿದರು. ನರಸಿಂಗಪೂರ ಸರ್ಕಾರಿ ಪ್ರೌಢಶಾಲೆಯಲ್ಲಿ ನೂತನ ಕಟ್ಟಡದ ಉದ್ಘಾಟನೆಯ ಬಳಿಕ, ಸ್ಕೌಟ್ಸ್ ಮತ್ತು ಗೈಡ್ಸ್ ನಲ್ಲಿ ರಾಜ್ಯಮಟ್ಟದ ಪ್ರಶಸ್ತಿಗೆ ಭಾಜನರಾದ ಶಾಲೆಯ ವಿದ್ಯಾರ್ಥಿನಿಯರಾದ ಪೂಜಾ ಪಾಟೀಲ ಮತ್ತು ಕಾವೇರಿ ಹಿಂಡೊಳ್ಳಿಗೆ ಪ್ರಶಸ್ತಿ ಪತ್ರ ವಿತರಣೆ ಮಾಡಿ, ಶುಭ ಕೋರಿದರು.
ಯಮಕನಮರಡಿ ಮತಕ್ಷೇತ್ರದಲ್ಲಿ 93 ಕೊಠಡಿಗಳ ನಿರ್ಮಾಣ: ಬಿಇಓ
ಈ ಸಂದರ್ಭದಲ್ಲಿ ಮಾತನಾಡಿದ ಹುಕ್ಕೇರಿ ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ ದಂಡಿನ್, ಕಳೆದ ಎರಡು ವರ್ಷಗಳಲ್ಲಿ ಪ್ರವಾಹದಿಂದ ಅನೇಕ ಸರ್ಕಾರಿ ಶಾಲೆಗಳ ಕಟ್ಟಡಗಳಿಗೆ ಹಾನಿಯಾಗಿತ್ತು. ಹೀಗಾಗಿ, ಶಾಸಕ ಸತೀಶ ಜಾರಕಿಹೊಳಿ ಅವರು ವಿಶೇಷ ಮುತುವರ್ಜಿ ವಹಿಸಿ ಯಮಕನಮರಡಿ ಮತಕ್ಷೇತ್ರದಲ್ಲಿ 93 ಕೊಠಡಿಗಳನ್ನು ಮಂಜೂರು ಮಾಡಿಸಿದ್ದರು. ಬಹುತೇಕ ಎಲ್ಲ ಕೊಠಡಿಗಳನ್ನು ನಿರ್ಮಾಣ ಮಾಡಲಾಗಿದೆ ಎಂದು ತಿಳಿಸಿದರು.
ಶಾಸಕರ ಸೂಚನೆಯ ಮೇರೆಗೆ ಮತಕ್ಷೇತ್ರದ ವಿವಿಧ ಶಾಲೆಗಳಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ಕೊಠಡಿಗಳ ದುರಸ್ತಿ ಕಾರ್ಯವನ್ನು ಕೂಡ ಕೈಗೊಳ್ಳಲಾಗಿದೆ. ಪ್ರಸಕ್ತ ಸಾಲಿನಲ್ಲಿ ಮತಕ್ಷೇತ್ರದ ವಿವಿಧ ಶಾಲೆಗಳಿಗೆ 65 ಕೊಠಡಿಗಳನ್ನು ಮಂಜೂರು ಮಾಡುವಂತೆ ಶಾಸಕ ಸತೀಶ ಅವರು ಪ್ರಸ್ತಾವನೆ ಸಲ್ಲಿಸಿದ್ದಾರೆ ಎಂದು ಮಾಹಿತಿ ನೀಡಿದರು.
ಮುಖಂಡರಾದ ಕಿರಣ್ ರಜಪೂತ್, ದಯಾನಂದ ಪಾಟೀಲ್, ಸುರೇಶ್ ಬೆನ್ನಿ, ಬಿ.ಎಂ. ಹುಲ್ಲೋಳಿ, ಸಿಡಿಪಿಒ ಮಂಜುನಾಥ್ ಪರಸನ್ನವರ, ಶಿಕ್ಷಕರು, ಗ್ರಾಮ ಪಂಚಾಯತ ಅಧ್ಯಕ್ಷರು, ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.