ಗೋಕಾಕ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಜತ್ತ-ಜಾಂಬೋಟಿ ರಾಜ್ಯ ಹೆದ್ದಾರಿಯಲ್ಲಿರುವ ಲೋಳಸೂರ ಸೇತುವೆ ಕಾಮಗಾರಿಯನ್ನು ಇಂದು ಪರಿಶೀಲಿಸಿದರು.
ಕಾಮಗಾರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಸತೀಶ ಅವರು, ಆದಷ್ಟು ಬೇಗ ಕಾಮಗಾರಿ ಮುಗಿಸಿ ಸೇತುವೆಯನ್ನು ಸಂಚಾರ ಮುಕ್ತಗೊಳಿಸಬೇಕು ಎಂದು ಸ್ಥಳದಲ್ಲಿದ್ದ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ತಿಳಿಸಿದರು.
ಕೆಲ ದಿನಗಳ ಹಿಂದೆ ಘಟಪ್ರಭಾ ನದಿ ಪ್ರವಾಹದಿಂದಾಗಿ ಜತ್ತ-ಜಾಂಬೋಟಿ ರಸ್ತೆಯಲ್ಲಿರುವ ಲೋಳಸೂರ ಸೇತುವೆ ಮುಳುಗಡೆಯಾಗಿ ಸಂಪರ್ಕ ಕಡಿತಗೊಂಡಿತ್ತು. ಇದರಿಂದ ಮಹಾರಾಷ್ಟ್ರ, ವಿಜಯಪುರ ಸಂಚಾರ ಸ್ಥಗಿತಗೊಂಡಿತ್ತು. ಗೋಕಾಕ ಮತ್ತು ಮೂಡಲಗಿ ತಾಲೂಕಿನ ಗ್ರಾಮಗಳ ಜನರಿಗೂ ಸಂಚಾರಕ್ಕೆ ಸಮಸ್ಯೆಯಾಗಿತ್ತು.
ಈ ವೇಳೆ ಸತೀಶ ಜಾರಕಿಹೊಳಿ ಅವರು ಸ್ಥಳಕ್ಕೆ ಭೇಟಿ ನೀಡಿ, ಶೀಘ್ರ ಕಾಮಗಾರಿ ಕೈಗೊಂಡು, ಸಂಚಾರಕ್ಕೆ ಸೇತುವೆಯನ್ನು ಮುಕ್ತಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದರು.
ಪ್ರವಾಹ ಇಳಿಮುಖವಾದ ಕೂಡಲೇ ಹದಗೆಟ್ಟಿದ್ದ ಸೇತುವೆಯ ದುರಸ್ತಿ ಕಾರ್ಯ ಕ್ಷಿಪ್ರ ಗತಿಯಲ್ಲಿ ನಡೆಯುತ್ತಿದ್ದು, ಸತೀಶ ಜಾರಕಿಹೊಳಿ ಅವರು ಈ ಬಗ್ಗೆ ವಿಶೇಷ ಮುತುವರ್ಜಿ ವಹಿಸಿ, ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಸಲಹೆ, ಸೂಚನೆಗಳನ್ನು ನೀಡಿದ್ದರು.
ಸ್ಥಳದಲ್ಲೇ ನಿಂತು ಚಿಕ್ಕಹೊಳಿ ಸೇತುವೆ ದುರಸ್ತಿ ಮಾಡಿಸಿದ್ದ ಸಾಹುಕಾರ್:
ಸತೀಶ ಜಾರಕಿಹೊಳಿ ಅವರು ಪ್ರವಾಹದಿಂದಾಗಿ ಜಲಾವೃತಗೊಂಡಿದ್ದ ಚಿಕ್ಕಹೊಳಿ ಸೇತುವೆಯನ್ನು ಕೆಲ ದಿನಗಳ ಹಿಂದೆ ಸ್ಥಳದಲ್ಲೇ ನಿಂತು ದುರಸ್ತಿ ಮಾಡಿಸಿದ್ದರು.
ಗೋಕಾಕ ಹೊರವಲಯದಲ್ಲಿ ಮಾರ್ಕಂಡೇಯ ನದಿಗೆ ಅಡ್ಡಲಾಗಿ ನಿರ್ಮಿಸಿದ್ದ ಚಿಕ್ಕಹೊಳಿ ಸೇತುವೆ ಪ್ರವಾಹದಿಂದಾಗಿ ಜಲಾವೃತಗೊಂಡು ಗೋಕಾಕ್ ಫಾಲ್ಸ್, ಕೊಣ್ಣೂರ, ಬೆಳಗಾವಿ ಮಾರ್ಗದಲ್ಲಿ ಸಂಚಾರ ಕಡಿತಗೊಂಡಿತ್ತು. ನೀರಿನ ಪ್ರಮಾಣ ಕಡಿಮೆಯಾದ ಮೇಲೆ ಸೇತುವೆ ಸಂಪೂರ್ಣ ಹದಗೆಟ್ಟಿತ್ತು. ಈ ವೇಳೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೇತುವೆಯ ದುರಸ್ತಿ ಕಾರ್ಯ ಕೈಗೊಳ್ಳಲು ಸತೀಶ ಸೂಚಿಸಿದ್ದರು.
ಸತೀಶ ಅವರ ಸೂಚನೆಯಂತೆ ಅಧಿಕಾರಿಗಳು ಒಂದೇ ದಿನದಲ್ಲಿ ಸೇತುವೆಯ ದುರಸ್ತಿ ಕಾರ್ಯ ಕೈಗೊಂಡಿದ್ದರು. ಸತೀಶ ಅವರು ಸ್ಥಳದಲ್ಲೇ ನಿಂತು ಸೇತುವೆಯ ಕಾಮಗಾರಿ ಮಾಡಿಸಿದ್ದರು. ಸೇತುವೆಯ ಕಾಮಗಾರಿ ಮುಗಿದ ಕೂಡಲೇ, ಕಾಮಗಾರಿಯ ಗುಣಮಟ್ಟವನ್ನು ಪರಿಶೀಲಿಸಲು ಖುದ್ದು ಸತೀಶ ಅವರ ತಮ್ಮ ವಾಹನದಲ್ಲಿ ಈ ಮಾರ್ಗವಾಗಿ ಬೆಳಗಾವಿಗೆ ಪಯಣಿಸಿದ್ದರು.