ಸವದತ್ತಿ: ಲೋಕಸಭಾ ಉಪಚುನಾವಣೆಯಲ್ಲಿ ಸೋತರೂ ಕೂಡ ಜನರ ಮನಸ್ಸಿನಲ್ಲಿ ನಾವಿದ್ದೇವೆ. ಕ್ಷೇತ್ರದ ಜನರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಜನರ ಸಮಸ್ಯೆಗೆ ಸ್ಪಂದಿಸುವುದೇ ನಮ್ಮ ಗುರಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.
ಮತಕ್ಷೇತ್ರದ ಸತ್ತಿಗೇರಿ,ಸೊಪಡ್ಲಾ, ಯರಗಟ್ಟಿ ಹಾಗೂ ಇಟ್ನಾಳ ಗ್ರಾಮಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಗೆ ಇಂದು (ಮಂಗಳವಾರ) ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭ ಹಾಗೂ ಕುಂದುಕೊರತೆಗಳ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ, ಅವರು ಮಾತನಾಡಿದರು.
ಗ್ರಾಮದ ಜನರಿಗೆ ಖುದ್ದಾಗಿ ಭೇಟಿಯಾಗಿ ಧನ್ಯವಾದ ಸಲ್ಲಿಸಲು ಬಂದಿದ್ದೇನೆ. ಕ್ಷೇತ್ರದ ಜನರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ ಎಂದು ಭರವಸೆ ನೀಡಿದರು.
ಜಿಲ್ಲೆಯ ಯಾವುದೇ ಗ್ರಾಮಗಳ ಜನರ ಸಮಸ್ಯೆಯಿದ್ದರೂ ನಿಮ್ಮ ನೆರವಿಗೆ ನಾವಿದ್ದೇವೆ. ಜನರು ಯಾವಾಗ ಬೇಕಾದರು ನಮ್ಮನ್ನು ಸಂಪರ್ಕಿಸಿ ನೆರವು ಪಡೆಯಬಹುದು ಎಂದು ಹೇಳಿದರು.
ಸರ್ಕಾರಗಳ ದುರಾಡಳಿತದ ವಿರುದ್ಧ ಜನರೇ ಧ್ವನಿ ಎತ್ತಬೇಕು:
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಉತ್ತಮ ಆಡಳಿತ ನೀಡುವಲ್ಲಿ ಸಂಪೂರ್ಣ ವಿಫಲವಾಗಿವೆ. ಕೊರೊನಾ ನಿರ್ವಹಣೆಯಲ್ಲೂ ಸರ್ಕಾರಗಳು ವೈಪಲ್ಯವಾಗಿವೆ. ಪೆಟ್ರೋಲ್, ಡೀಸೆಲ್, ಗ್ಯಾಸ್ ಸೇರಿ ಎಲ್ಲ ಅಗತ್ಯ ವಸ್ತುಗಳ ಬೆಲೆಯೂ ಗಗನಕ್ಕೇರಿದ್ದು, ಜನಸಾಮಾನ್ಯರ ಬದುಕು ದುಸ್ತರವಾಗಿದೆ. ಆದರೂ ಕೂಡ ಸರ್ಕಾರ ಜನರ ಸಮಸ್ಯೆಗಳನ್ನು ಪರಿಹರಿಸಲು ತಯಾರಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಈ ಬಗ್ಗೆ ಜನರೇ ಧ್ವನಿ ಎತ್ತಬೇಕು ಎಂದರು.
ಸೋತರೂ ಜನರೊಂದಿಗೆ ಸಂಪರ್ಕದಲ್ಲಿರುವ ರಾಜಕಾರಣಿ ಸತೀಶ ಜಾರಕಿಹೊಳಿ: ದ್ಯಾಮನಗೌಡರ
ಚುನಾವಣೆಯಲ್ಲಿ ಸೋತರೂ ಕೂಡ ಜನರೊಂದಿಗೆ ನಿರಂತರ ಸಂಪರ್ಕದಲ್ಲಿರುವ ನಾಯಕನೆಂದರೇ ಸತೀಶ ಜಾರಕಿಹೊಳಿ ಅವರು ಮಾತ್ರ. ತಮ್ಮನ್ನು ಬೆಂಬಲಿಸಿದ ಜನರಿಗೆ ಧನ್ಯವಾದ ಸಲ್ಲಿಸುವ ನಿಟ್ಟಿನಲ್ಲಿ ಕ್ಷೇತ್ರದ ಎಲ್ಲ ಹಳ್ಳಿಗಳಿಗೂ ಅವರು ಬೇಟಿ ನೀಡುತ್ತಿದ್ದಾರೆ. ಜನರ ಕಷ್ಟ, ನಷ್ಟಗಳನ್ನು ವಿಚಾರಿಸುತ್ತಿದ್ದಾರೆ ಎಂದು ಹೇಳಿದರು.
ಚುನಾವಣೆಯಲ್ಲಿ ಪಕ್ಷಕ್ಕಾಗಿ ದುಡಿದ ಎಲ್ಲ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಮತದಾರರಿಗೆ ಸತೀಶ ಜಾರಕಿಹೊಳಿ ಅವರು ಪಕ್ಷದ ಪರವಾಗಿ ಮತ್ತು ವೈಯಕ್ತಿಕವಾಗಿ ಕಾರ್ಯಕ್ರಮದಲ್ಲಿ ಅಭಿನಂದನೆ ಸಲ್ಲಿಸಿದರು. ಗ್ರಾಮಸ್ಥರ ಅಹವಾಲುಗಳನ್ನು ಸ್ವೀರಿಸಿದರು. ಇದೇ ಸಂದರ್ಭದಲ್ಲಿ ಸತೀಶ ಅವರನ್ನು ಗ್ರಾಮಸ್ಥರು ಹಾಗೂ ಕಾರ್ಯಕರ್ತರು ಸನ್ಮಾನಿಸಿ, ಅಭಿನಂದಿಸಿದರು.
ಮುಖಂಡರಾದ ರವೀಂದ್ರ ಯಲಿಗಾರ, ಉಮೇಶ ಬಾಳಿ, ವಿಶ್ವಾಸ ವೈದ್ಯ, ಗೌತಮ ದ್ಯಾಮನಗೌಡರ, ಮಲ್ಲು ಜಕಾತಿ, ಡಿ.ಡಿ. ಟೋಪೋಜಿ, ಯಶವಂತ ಯಲಿಗಾರ, ಈರಣ್ಣ ಸಂಗಪನವರ, ಬಿ.ಐ. ಹರಳಿ ಸೇರಿ ಹಾಗೂ ಸವದತ್ತಿ ತಾಲೂಕಿನ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ಗ್ರಾಮಸ್ಥರು ಪಾಲ್ಗೊಂಡಿದ್ದರು.