ಹುಕ್ಕೇರಿ: ತಾಲೂಕಿನ ಯಮಕನಮರಡಿ ವಿಧಾನಸಭೆ ಮತಕ್ಷೇತ್ರದ ವ್ಯಾಪ್ತಿಯಲ್ಲಿ ವಿದ್ಯುತ್ ಪೂರೈಕೆ ಸಂಬಂಧಿತ ಸಮಸ್ಯೆಗಳನ್ನು ತ್ವರಿತಗತಿಯಲ್ಲಿ ಪರಿಹರಿಸುವಂತೆ ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆದ ಶಾಸಕ ಸತೀಶ ಜಾರಕಿಹೊಳಿ ಸೂಚಿಸಿದರು.
ಪಟ್ಟಣದ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಸಭಾಭವನದಲ್ಲಿ ಶುಕ್ರವಾರ ನಡೆದ ಗ್ರಾಹಕರು ಮತ್ತು ಆಡಳಿತ ಮಂಡಳಿ ಸಭೆಯಲ್ಲಿ ಮಾತನಾಡಿದ ಅವರು, ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ವಿದ್ಯುತ್ ಪೂರೈಕೆಯಲ್ಲಿ ಯಾವುದೇ ರೀತಿಯ ತೊಂದರೆಯಾಗದಂತೆ ನಿಗಾ ವಹಿಸಬೇಕು ಎಂದು ತಾಕೀತು ಮಾಡಿದರು.
ಹೊಲಗದ್ದೆಗಳು, ಗ್ರಾಹಕರಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡಿ:
ಯಮಕನಮರಡಿ ಕ್ಷೇತ್ರದಲ್ಲಿ ಸುಮಾರು 20 ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಈ ಸಂಘದಿಂದ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ. ರೈತರ ಹೊಲಗದ್ದೆಗಳು ಹಾಗೂ ಗ್ರಾಹಕರಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡಬೇಕು. ಕೃಷಿ ಚಟುವಟಿಕೆ ಮತ್ತು ಕುಡಿಯುವ ನೀರಿನ ವಿದ್ಯುತ್ ಪೂರೈಕೆಯಲ್ಲಿ ಯಾವುದೇ ರೀತಿಯ ಅಡಚಣೆಯಾಗದಂತೆ ನೋಡಿಕೊಳ್ಳಬೇಕು ಎಂದು ಅವರು ಆದೇಶಿಸಿದರು.
ವಿದ್ಯುತ್ ಪರಿವರ್ತಕ (ಟಿಸಿ) ಬದಲಾಯಿಸುವುದು, ಕಂಬಗಳ ಸ್ಥಳಾಂತರ, ಅನಧಿಕೃತ ವಿದ್ಯುತ್ ಸಂಪರ್ಕಗಳ ಜೋಡಣೆ ಕಡಿತಗೊಳಿಸುವುದು, ಸಮಪರ್ಕವಾಗಿ ಬೀದಿ ದೀಪಗಳ ನಿರ್ವಹಣೆ, ವಿದ್ಯುತ್ ಸಂಬಂಧಿತ ಎಲ್ಲ ಕಾಮಗಾರಿಗಳ ನಿರ್ವಹಣೆಯಲ್ಲಿ ಆಗುತ್ತಿರುವ ಲೋಪದೋಷಗಳನ್ನು ಸರಿಪಡಿಸಿಕೊಂಡು ಸಮರ್ಪಕ ವಿದ್ಯುತ್ ಪೂರೈಕೆ ಮಾಡುವಂತೆ ಅವರು ಸೂಚಿಸಿದರು.
ತಹಶೀಲ್ದಾರ್ ಡಿ.ಎಚ್. ಹೂಗಾರ, ಸಂಘದ ಅಧ್ಯಕ್ಷ ಕಲಗೌಡ ಪಾಟೀಲ, ಉಪಾಧ್ಯಕ್ಷ ವಿಷ್ಠು ರೇಡೇಕರ, ಮುಖಂಡರಾದ ಮಹಾಂತೇಶ ಮಗದುಮ್ಮ, ಕಿರಣ ರಜಪೂತ, ದಸ್ತಗೀರ ಬಸ್ಸಾಪುರೆ, ಪಪ್ಪುಗೌಡ ಪಾಟೀಲ, ಮಲ್ಲಪ್ಪ ಬಿಸಿರೊಟ್ಟಿ, ರಾಜು ರೇವಣ್ಣವರ, ದಯಾನಂದ ಪಾಟೀಲ ಮತ್ತಿತರರು ಉಪಸ್ಥಿತರಿದ್ದರು.
ನಿರ್ದೇಶಕ ಅಶೋಕ ಚಂದಪ್ಪಗೋಳ ಸ್ವಾಗತಿಸಿದರು. ಸ್ಥಾನಿಕ ಅಭಿಯಂತರ ನೇಮಿನಾಥ ಖೆಮಲಾಪುರೆ ನಿರೂಪಿಸಿದರು. ದುರದುಂಡಿ ನಾಯಿಕ ವಂದಿಸಿದರು.