ಸವದತ್ತಿ: “ಸ್ಥಳೀಯ ಶಾಸಕರು ಹಾಗೂ ಸಚಿವರು ತಾಲೂಕು ಪಂಚಾಯತ ಮತ್ತು ಜಿಲ್ಲಾ ಪಂಚಾಯತ ಚುನಾವಣಾ ಮೀಸಲಾತಿಯಲ್ಲಿ ಉದ್ದೇಶಪೂರ್ವಕವಾಗಿ ಗೊಂದಲ ಸೃಷ್ಟಿ ಮಾಡಿದ್ದಾರೆ. ನೀತಿ, ನಿಯಮಗಳನ್ನು ಬಿಟ್ಟು ಸರ್ಕಾರ ಮೀಸಲಾತಿ ಪ್ರಕಟಿಸಿದೆ” ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಆರೋಪಿಸಿದರು.
ತಾಲೂಕಿನ ತಲ್ಲೂರ ಗ್ರಾಮದಲ್ಲಿ ಇಂದು (ಮಂಗಳವಾರ) ನಡೆದ ಕಾರ್ಯಕರ್ತರ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
“ಕೆಲವು ಕ್ಷೇತ್ರಗಳಲ್ಲಿ ಕಳೆದ ಬಾರಿ ಇದ್ದ ಮೀಸಲಾತಿಯನ್ನೇ ಮತ್ತೆ ಪ್ರಕಟಿಸಲಾಗಿದೆ. ಹೀಗಾಗಿ, ಈ ಬಗ್ಗೆ ಕಾನೂನು ಹೋರಾಟ ಮಾಡಲಾಗುವುದು” ಎಂದು ತಿಳಿಸಿದರು.
ಕೆಪಿಸಿಸಿಯಿಂದ ನಾಳೆ ಸೈಕಲ್ ಜಾಥಾ:
“ಕೆಪಿಸಿಸಿಯಿಂದ ನಿರಂತರವಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿದ್ದೇವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ವೈಪಲ್ಯಗಳನ್ನು ಜನರಿಗೆ ತಲುಪಿಸುತ್ತಿದ್ದೇವೆ. ಬೆಲೆ ಏರಿಕೆ ಸೇರಿ ಜನರ ಸಮಸ್ಯೆಗಳ ಪರವಾಗಿ ನಿರಂತರವಾಗಿ ಹೋರಾಟ ಮಾಡುತ್ತಿದ್ದೇವೆ. ತೈಲ ಬೆಲೆ ಏರಿಕೆಯನ್ನು ವಿರೋಧಿಸಿ ಕೆಪಿಸಿಸಿ ಯಿಂದ ನಾಳೆ ರಾಜ್ಯಾಧ್ಯಂತ ಸೈಕಲ್ ಜಾಥಾ ಹಮ್ಮಿಕೊಳ್ಳಲಾಗಿದೆ” ಎಂದು ಹೇಳಿದರು.
ಜನರೊಂದಿಗೆ ನಿರಂತರ ಸಂಪರ್ಕ:
“ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ಸೋತರು ಕೂಡ ಜನರೊಂದಿಗೆ ನಾವು ನಿರಂತರ ಸಂಪರ್ಕ ಇಟ್ಟುಕೊಂಡಿದ್ದೇವೆ. ಕೇವಲ ಚುನಾವಣೆ ಇದ್ದಾಗ ಮಾತ್ರ ಬರುವವರು ನಾವಲ್ಲ. ಜನರ ಸಮಸ್ಯೆ ಇದ್ದಾಗಲೂ ಜನರ ಬಳಿ ಬರಬೇಕು. ಆ ಕಾರ್ಯವನ್ನು ನಾವು ಮಾಡುತ್ತಿದ್ದೇವೆ” ಎಂದರು.
“ಜನಪ್ರತಿನಿಧಿಗಳು 5 ವರ್ಷಗಳಿಗೊಮ್ಮೆ ಚುನಾವಣೆ ಇದ್ದಾಗ ಮಾತ್ರ ಜನರ ಬಳಿ ಬರಬಾರದು. ಜನರ ಕಷ್ಟ, ನಷ್ಟಗಳನ್ನು ಕೇಳಲು ಜನರನ್ನು ಆಗಾಗ ಭೇಟಿ ಮಾಡಬೇಕು. ಅವರಿಗೆ ಧೈರ್ಯ ತುಂಬಬೇಕು, ಸಮಸ್ಯೆಗಳನ್ನು ಪರಿಹರಿಸಬೇಕು. ಅಂದಾಗ ಮಾತ್ರ ಪಕ್ಷ ಸಂಘಟನೆ ಸಾಧ್ಯವಾಗುತ್ತದೆ” ಎಂದು ಹೇಳಿದರು.