ಚಿಕ್ಕೋಡಿ: “ಕೊರೊನಾ ನಿಯಂತ್ರಣಕ್ಕಾಗಿ ತಮ್ಮ ಜೀವದ ಹಂಗು ತೊರೆದು ಜನರ ಜೀವ ಉಳಿಸುವ ಕಾರ್ಯವನ್ನು ಮಾಡಿರುವ ಪಂಚಾಯತ ಸಿಬ್ಬಂದಿಗಳು, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ವೈದ್ಯರ ಕಾರ್ಯ ನಿಜಕ್ಕೂ ಶ್ಲಾಘನೀಯ” ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.
ತಾಲೂಕಿನ ಕರೋಶಿ ಗ್ರಾಮ ಪಂಚಾಯತ ಸಭಾಭವನದಲ್ಲಿ ಶನಿವಾರ ನಡೆದ ಕರೋಶಿ, ನಾಗರಮುನ್ನೋಳಿ, ಕಬ್ಬೂರ ಗ್ರಾಮಗಳ ಕೊರೊನಾ ವಾರಿಯರ್ಸಗಳ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
“ಕೋವಿಡ್ ಸಂದರ್ಭದಲ್ಲಿ ಕೊರೊನಾ ವಾರಿಯರ್ಸ್ ಗಳು ಮಾಡಿರುವ ನಿಸ್ವಾರ್ಥ ಸೇವೆಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ” ಎಂದರು.
ಕಾಂಗ್ರೆಸ್ ಪಕ್ಷದ ಮುಖಂಡ ಧೂಳಗೌಡ ಪಾಟೀಲ ಹಾಗೂ ಎಸ್.ಪಿ. ಜಮಾದಾರ ಮಾತನಾಡಿದರು. ಕರೋಶಿ ಅಂಜುಮನ ಇಸ್ಲಾಂ ಸಮಿತಿ ಹಾಗೂ ಕೊರೊನಾ ವಾರಿಯರ್ಸ ಆಗಿ ಕಾರ್ಯ ಮಾಡಿದ ಗ್ರಾಮ ಪಂಚಾಯತ ಸಿಬ್ಬಂದಿಗಳನ್ನು ಕಾಂಗ್ರೆಸ್ ಪಕ್ಷದಿಂದ ಸನ್ಮಾನಿಸಲಾಯಿತು.
ಮಾಜಿ ಸಚಿವ ವೀರಕುಮಾರ ಪಾಟೀಲ, ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣರಾವ ಚಿಂಗಳೆ, ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಮಹಾವೀರ ಮೋಹಿತೆ, ಅಪ್ಪಸಾಬ ಕುಲಗೂಡೆ, ಕಾಂಗ್ರೆಸ್ ಯುವ ಘಟಕದ ಜಿಲ್ಲಾಧ್ಯಕ್ಷ ಯಲ್ಲಪ್ಪಾ ಶಿಂಗೆ, ತಾಪಂ ಸದಸ್ಯ ರಾಜು ಪಾಟೀಲ, ವೃಷಭ ಪಾಟೀಲ, ರಾಜು ಕೋಟಗಿ, ಎಚ್.ಎಸ್. ನಸಲಾಪುರೆ, ರವಿ ಮಾಳಿ, ಧನು ಶೇಂಡೂರೆ ಉಪಸ್ಥಿತರಿದ್ದರು.
ನಾಗರಮುನ್ನೋಳ್ಳಿ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಶಂಕರಗೌಡ ಪಾಟೀಲ ಸ್ವಾಗತಿಸಿದರು.
ಕಾರ್ಯಕರ್ತರು, ಪದಾಧಿಕಾರಿಗಳಲ್ಲಿ ಭಿನ್ನಾಬಿಪ್ರಾಯವಿಲ್ಲ:
ರಾಯಭಾಗ ವಿಧಾನಸಭಾ ಕ್ಷೇತ್ರದ ನಾಗರಮುನ್ನೋಳ್ಳಿ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಪದಾಧಿಕಾರಿಗಳಲ್ಲಿ ಯಾವುದೇ ಭಿನ್ನಾಬಿಪ್ರಾಯವಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಸ್ಪಷ್ಟಪಡಿಸಿದರು.
ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ನಾಗರಮುನ್ನೋಳ್ಳಿ ಬ್ಲಾಕ್ ಕಾಂಗ್ರೆಸ್ ಪಕ್ಷದಿಂದ ಮೂಲ ಕಾಂಗ್ರೆಸ್ಸಿಗರನ್ನು ಕಡೆಗಣಿಸಲಾಗುತ್ತಿದೆ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿ, “ಕಾಂಗ್ರೆಸ್ ಪಕ್ಷದಲ್ಲಿ ಯಾರನ್ನು ಸಹ ಕಡೆಗಣಿಸುವಂತಿಲ್ಲ. ಇಲ್ಲಿ ಎಲ್ಲರೂ ಒಟ್ಟಾಗಿಯೇ ಪಕ್ಷ ಸಂಘಟಿಸಲು ಶ್ರಮಿಸುತ್ತಿದ್ದೇವೆ” ಎಂದು ತಿಳಿಸಿದರು.
“ಜಿಲ್ಲಾ ಅಧ್ಯಕ್ಷರು ಸೇರಿದಂತೆ ಕಾಂಗ್ರೆಸ್ ಪಕ್ಷದಲ್ಲಿ ಕೆಲವು ಪದಾಧಿಕಾರಿಗಳನ್ನು ಬದಲಾವಣೆ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ. ಶೀಘ್ರ ಕೆಲವು ಜಿಲ್ಲಾಧ್ಯಕ್ಷರನ್ನು ಬದಲಾವಣೆ ಮಾಡಲಾಗುವುದು” ಎಂದು ಹೇಳಿದರು.