ಯಮಕನಮರಡಿ: ಜಿಲ್ಲಾ ಪಂಚಾಯತ ಹಾಗೂ ಹುಕ್ಕೇರಿ ತೋಟಗಾರಿಕಾ ಇಲಾಖೆಯಿಂದ ಎನ್ಎಂಎಚ್ ಯೋಜನೆಯಡಿ ಯಮಕನಮರಡಿ ಹೊರವಲಯದ ಹಿಡಕಲ್ ಡ್ಯಾಂ ರಸ್ತೆಯಲ್ಲಿ ನೂತನವಾಗಿ ನಿರ್ಮಿಸಿರುವ ಸಂಚಾರಿ ಹಣ್ಣಿನ ಮಾರುಕಟ್ಟೆಯನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಶಾಸಕ ಸತೀಶ ಜಾರಕಿಹೊಳಿ ಅವರು ಇಂದು ಉದ್ಘಾಟಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಮೊದಲಿನಿಂದಲೂ ಇಲ್ಲಿ ವ್ಯಾಪಾರಿಗಳು ರಸ್ತೆ ಬದಿಯಲ್ಲಿಯೇ ಕುಳಿತು ವ್ಯಾಪಾರ ಮಾಡುತ್ತಿದ್ದರು. ಹೀಗಾಗಿ, ವ್ಯಾಪಾರಿಗಳು ಹಾಗೂ ಗ್ರಾಹಕರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಸಂಚಾರಿ ಮಾರುಕಟ್ಟೆಯನ್ನು ನಿರ್ಮಿಸಿಕೊಡಲಾಗಿದೆ” ಎಂದು ಹೇಳಿದರು.
“ವ್ಯಾಪಾರಿಗಳು ಇದೇ ಸ್ಥಳದಲ್ಲಿ ಮಾರಾಟ ಮಾಡಬಹುದು ಜೊತೆಗೆ ಬೇರೆ ಕಡೆಯೂ ತೆರಳಿ ಮಾರಾಟ ಮಾಡಬಹುದಾಗಿದೆ. ಇದರಿಂದ ಸ್ವಚ್ಛತೆಯನ್ನು ಕಾಪಾಡಬಹುದಾಗಿದೆ. ಇದನ್ನು ವ್ಯಾಪಾರಿಗಳು ಮತ್ತು ಗ್ರಾಹಕರು ಸದುಪಯೋಗ ಪಡಿಸಿಕೊಳ್ಳಬೇಕು” ಎಂದು ಸಲಹೆ ನೀಡಿದರು.
ಹುಕ್ಕೇರಿ ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಉಮೇಶ ಸಿದ್ನಾಳ ಮಾತನಾಡಿ, “ಶಾಸಕ ಸತೀಶ ಜಾರಕಿಹೊಳಿ ಅವರ ಸೂಚನೆಯ ಮೇರೆಗೆ ಸಂಚಾರಿ ಹಣ್ಣಿನ ಮಾರುಕಟ್ಟೆಯನ್ನು ನಿರ್ಮಿಸಲಾಗಿದೆ. ಸದ್ಯ ಇಲ್ಲಿ 17 ಕ್ಕೂ ಹೆಚ್ಚು ಹಣ್ಣಿನ ಅಂಗಡಿಗಳು ಇವೆ” ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ ಸದಸ್ಯ ಮಹಾಂತೇಶ ಮಗದುಮ್, ಹುಕ್ಕೇರಿ ತಹಶೀಲ್ದಾರ ಬಿ.ಎಚ್. ಹೂಗಾರ, ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ಸೇರಿ ಮುಖಂಡರು ಹಾಗೂ ಇನ್ನಿತರರು ಇದ್ದರು.