ಹುಕ್ಕೇರಿ: ತಾಲೂಕಿನ ಹಿರಣ್ಯಕೇಶಿ ನದಿ ಹೂಳೆತ್ತುವ ಹೆಸರಿನಲ್ಲಿ ಜಿಲ್ಲಾ ಪಂಚಾಯತ ಅಧಿಕಾರಿಗಳು ಹುಚ್ಚಾಟ ನಡೆಸಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆದ ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಅವರು ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ತಾಲೂಕು ಪಂಚಾಯತ ಸಭಾಭವನದಲ್ಲಿ ಇಂದು (ಸೋಮವಾರ) ಏರ್ಪಡಿಸಿದ್ದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು.
ಉದ್ಯೋಗ ಖಾತರಿ ಯೋಜನೆಯಲ್ಲಿ ಕಳೆದ ವರ್ಷ ಹಿರಣ್ಯಕೇಶಿ ನದಿ ಹೂಳೆತ್ತುವುದಕ್ಕಾಗಿ ಕೋಟ್ಯಂತರ ರೂ.ಗಳನ್ನು ವ್ಯಯಿಸಲಾಗಿದೆ. ಒಂದು ವಾರದ ಬಳಿಕ ಈ ಕಾಮಗಾರಿಯ ಯಾವುದೇ ಕುರುಹುಗಳು ಸಿಗಲಿಲ್ಲ. ನದಿ ಹೂಳೆತ್ತುವ ನೆಪದಲ್ಲಿ ಜಿಲ್ಲಾ ಪಂಚಾಯತ ಸಿಇಒ ಮತ್ತು ಅಧಿಕಾರಿಗಳು ಹಗರಣ ನಡೆಸಿರುವ ಶಂಕೆ ವ್ಯಕ್ತವಾಗಿದ್ದು, ಈ ಕೂಡಲೇ ಸಮಗ್ರ ತನಿಖೆ ನಡೆಸಲು ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ಹೇಳಿದರು.
ನಿಗದಿತ ಅವಧಿಯಲ್ಲಿ ಎಲ್ಲ ಯೋಜನೆಗಳನ್ನು ಅನುಷ್ಠಾನಗೊಳಿಸಿ:
ಜಲಜೀವನ ಮಿಷನ್ ಯೋಜನೆ, 14 ಮತ್ತು 15 ನೇ ಹಣಕಾಸು ಯೋಜನೆ, ಸ್ವಚ್ಛ ಭಾರತ್ ಮಿಷನ್, ವಿವಿಧ ವಸತಿ ಯೋಜನೆ, ಗ್ರಾಪಂ ಕರ ವಸೂಲಾತಿ ಸೇರಿದಂತೆ ಮತ್ತಿತರ ಯೋಜನೆಗಳ ಅನುಷ್ಠಾನದಲ್ಲಿ ಯಾವುದೇ ರೀತಿಯ ವಿಳಂಬ ಮಾಡಬಾರದು. ನಿಗದಿತ ಅವಧಿಯಲ್ಲಿ ಎಲ್ಲ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕು. ನೆರೆಹಾವಳಿ ಮತ್ತು ಕೋವಿಡ್ ನಿಯಂತ್ರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಸೂಚಿಸಿದರು.
ಶಾಲೆ, ಅಂಗನವಾಡಿ ಕಟ್ಟಡಗಳ ಸ್ಥಿತಿಗತಿ ಬಗ್ಗೆ ಮಾಹಿತಿ ಪಡೆದ ಜಾರಕಿಹೊಳಿ, ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳನ್ನು ನೆಲಸಮಗೊಳಿಸಬೇಕು. ಒತ್ತುವರಿಯಾದ ಕೆರೆ, ಗಾವಟಾನ, ಹಳ್ಳ-ಕೊಳ್ಳಗಳನ್ನು ಸಮೀಕ್ಷೆ ನಡೆಸಿ ತೆರವುಗೊಳಿಸಬೇಕು. ಕೇವಲ ಸರ್ಕಾರಿ ಆಸ್ತಿಯಲ್ಲಿ ಸಸಿಗಳನ್ನು ನೆಡದೇ ಖಾಸಗಿ ಜಮೀನುಗಳನ್ನು ಸಸಿ ನೆಡಲು ಅವಕಾಶ ಕಲ್ಪಿಸಬೇಕು. ಮಳೆಗಾಲದಲ್ಲಿ ಸಂಭವಿಸಬಹುದಾದ ವಿಕೋಪಗಳನ್ನು ತಡೆಗಟ್ಟಲು ಮುಂಜಾಗೃತಾ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.
ಕುಡಿಯುವ ನೀರು, ವಿದ್ಯುತ್ ಪೂರೈಕೆಗೆ ತೊಂದರೆಯಾಗದಂತೆ ನೋಡಿಕೊಳ್ಳಿ:
ಕುಡಿಯುವ ನೀರು ಮತ್ತು ವಿದ್ಯುತ್ ಪೂರೈಕೆಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಸರ್ಕಾರದ ಎಲ್ಲ ಯೋಜನೆಗಳ ಅನುದಾನ ಸಮರ್ಪಕವಾಗಿ ವಿನಿಯೋಗವಾಗುವಂತೆ ನಿಗಾ ವಹಿಸಬೇಕು. ಪ್ರತಿ ಯೋಜನೆಯಲ್ಲಿ ಆದ್ಯತಾ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕು. ಈ ಮೂಲಕ ಯಮಕನಮರಡಿ ಕ್ಷೇತ್ರವನ್ನು ಮಾದರಿಯನ್ನಾಗಿ ರೂಪಿಸಲು ಪ್ರತಿ ಇಲಾಖೆಗಳು ಕೈಜೋಡಿಸಬೇಕು ಎಂದು ಅವರು ಹೇಳಿದರು.
ತಹಶೀಲ್ದಾರ್ ಡಾ.ಡಿ.ಎಚ್. ಹೂಗಾರ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಉಮೇಶ ಸಿದ್ನಾಳ, ಪಿಎಸ್‍ಐಗಳಾದ ಬಿ.ವಿ. ನ್ಯಾಮಗೌಡ, ಸಿದ್ರಾಮಪ್ಪ ಉನ್ನದ, ಮುಖಂಡರಾದ ಕಿರಣ ರಜಪೂತ, ಮಂಜುನಾಥ ಪಾಟೀಲ, ಮಹಾಂತೇಶ ಮಗದುಮ್ಮ, ಫಕೀರವ್ವಾ ಹಂಚಿನಮನಿ, ದಸ್ತಗೀರ ಬಸಾಪುರೆ, ಮ್ಯಾನೇಜರ್ ಆರ್.ಎ. ಚಟ್ನಿ ಮತ್ತಿತರರು ಉಪಸ್ಥಿತರಿದ್ದರು.
ಬಿಸಿಯೂಟ ಯೋಜನೆ ಸಹಾಯಕ ನಿರ್ದೇಶಕ ಶ್ರೀಶೈಲ ಹಿರೇಮಠ ಸ್ವಾಗತಿಸಿ, ವಂದಿಸಿದರು.