ಬೆಳಗಾವಿ: “ರಾಜ್ಯದಲ್ಲಿ ಸಿಎಂ ಬದಲಾವಣೆಗೆ ಕುಸ್ತಿ ಪ್ರಾರಂಭವಾಗಿದೆ. ಅವರ ಪಕ್ಷದ ಶಾಸಕರು ಪರ, ವಿರೋಧವಾಗಿ ಸಹಿ ಸಂಗ್ರಹ ಮಾಡುತ್ತಿದ್ದಾರೆ. ರಾಜ್ಯದ ಸಿಎಂ ಮುಂದುವರೆಯುವುದು ಬಿಡುವುದು ಕುಸ್ತಿಯ ಮೇಲೆ ಅವಲಂಬಿತವಾಗಿದೆ” ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.
ನಗರದ ಕಾಂಗ್ರೆಸ್ ಭವನದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಅದು ಬಿಜೆಪಿ ಪಕ್ಷದ ಆಂತರಿಕ ವಿಚಾರ. ಅವರ ಪಕ್ಷದ ವರಿಷ್ಠರು ಏನು ವರದಿ ಕೊಡುತ್ತಾರೊ? ಅವರು ಏನು ನಿರ್ಧಾರ ತೆಗೆದುಕೊಳ್ಳುತ್ತಾರೊ? ಅವರಿಗೆ ಬಿಟ್ಟಿದ್ದು” ಎಂದರು.
“ಕಾಂಗ್ರೆಸ್ ನಿಂದ ಜಿಲ್ಲೆಯ ಎಲ್ಲ ತಾಲೂಕು ಆಸ್ಪತ್ರೆಗಳಿಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಯನ್ನು ಪರಿಶೀಲಿಸುತ್ತಿದ್ದೇವೆ. ಆಸ್ಪತ್ರೆಗಳಲ್ಲಿನ ಸಮಸ್ಯೆಗಳು ಹಾಗೂ ಅಗತ್ಯತೆಗಳ ಬಗ್ಗೆ ಪಕ್ಷದಿಂದ ಸರ್ಕಾರದ ಗಮನಕ್ಕೆ ತರಲಾಗುವುದು. ಮೂರನೇ ಅಲೆಗೆ ಸರ್ಕಾರ ಈಗಿನಿಂದಲೇ ಸಜ್ಜಾಗಬೇಕು. ಎಲ್ಲ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಬೇಕು” ಎಂದು ಹೇಳಿದರು.
ಸೋಲಿನಿಂದ ಪಾಠ ಕಲಿತಿದ್ದೇವೆ:
“ಲೋಕಸಭಾ ಉಪಚುನಾವಣೆಯ ಸೋಲು ನಮಗೆ ಪಾಠವಾಗಿದೆ. ಸೋಲಿನಿಂದ ನಾವು ಪಾಠ ಕಲಿತಿದ್ದು, ಪಕ್ಷವನ್ನು ಇನ್ನೂ ಯಾವ ರೀತಿ ಸಂಘಟನೆ ಮಾಡಬೇಕು ಎಂಬ ಕುರಿತು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ” ಎಂದು ಹೇಳಿದರು.
“ಮುಖಂಡ ಅಶೋಕ ಪೂಜಾರಿ ಹಾಗೂ ಇನ್ನಿತರ ಮುಖಂಡರ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಲಾಕ್ ಡೌನ್ ಮುಗಿದ ನಂತರ ತೀರ್ಮಾನಿಸಲಾಗುವುದು” ಎಂದು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ಕೋವಿಡ್ ಸಂಕಷ್ಟದಲ್ಲಿ ಕಾಂಗ್ರೆಸ್ ನಿಂದ ಜನಪರ ಕೆಲಸ:
“ಕೊವೀಡ್ ಸಂಕಷ್ಟದಲ್ಲಿ ಮೊದಲಿನಿಂದಲೂ ಕಾಂಗ್ರೆಸ್ ಜನಪರವಾದ ಕೆಲಸ ಮಾಡುತ್ತಿದೆ. ಲಾಕ್ ಡೌನ್ ವೇಳೆ ಬಡವರು, ಕಾರ್ಮಿಕರು, ರೈತರ ಪರವಾಗಿ ನಿಂತು ಕೆಲಸ ಮಾಡಿದೆ. ಅಲ್ಲದೆ, ಎರಡನೇ ಅಲೆಯಲ್ಲಿ ನಿರಂತರವಾಗಿ ಸರ್ಕಾರವನ್ನು ಎಚ್ಚರಿಸಿ ವ್ಯಾಕ್ಸಿನ್, ಬೆಡ್, ಆಕ್ಸಿಜನ್ ವ್ಯವಸ್ಥೆ ಮಾಡಿರುವ ಬಗ್ಗೆ ಹೆಮ್ಮೆ ಇದೆ” ಎಂದು ಹೇಳಿದರು.
“ಎಲ್ಲರಿಗೂ ಉಚಿತ ವಾಕ್ಸಿನ್ ನೀಡಬೇಕೆಂದು ಕಾಂಗ್ರೆಸ್ ಪಕ್ಷ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕುತ್ತಲೇ ಬಂದಿತ್ತು. ಇದರ ಪರಿಣಾಮವಾಗಿ ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡುವ ನಿರ್ಧಾರವನ್ನು ಸರ್ಕಾರ ಮಾಡಿದೆ” ಎಂದರು.
“ಕೋವಿಡ್ ನಿಂದ ಪ್ರಾಣಿಗಳ ನಿರ್ವಹಣೆ ಕಷ್ಟವಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಭೂತರಾಮನಹಟ್ಟಿ ಕಿರು ಪ್ರಾಣಿ ಸಂಗ್ರಹಾಲಯದಿಂದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಸೇರಿ ಇನ್ನಿತರರು ಪ್ರಾಣಿಗಳನ್ನು ದತ್ತು ಪಡೆದಿದ್ದಾರೆ. ಮತ್ತಷ್ಟು ಜನ ಪ್ರಾಣಿಗಳನ್ನು ದತ್ತು ಪಡೆದರೇ ಅನುಕೂಲವಾಗುತ್ತದೆ” ಎಂದು ಹೇಳಿದರು.
ಬೆಳಗಾವಿ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿನಯ ನಾವಲಗಟ್ಟಿ, ಕಿಸಾನ್ ಕಾಂಗ್ರೆಸ್ ರಾಜ್ಯ ಘಟಕದ ಸಂಚಾಲಕ ರಾಜೇಂದ್ರ ಪಾಟೀಲ, ಎಐಸಿಸಿ ಗೋವಾ ವೀಕ್ಷಕ, ಸುನೀಲ ಹನುಮನ್ನವರ, ಸೈಪ್ ಶೇಠ್, ಕಾರ್ತಿಕ ಪಾಟೀಲ, ಸಿದ್ದಿಕ್ ಅಂಕಲಿಗಿ, ಇಮ್ರಾನ್ ತಬಕೀರ್, ಜಯಶ್ರೀ ಮಾಳಗಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.