ಬೆಳಗಾವಿ: ಅಂದು ದಿನಾಂಕ 28/05/2021. ಮಹಾರಾಷ್ಟ್ರದ ಅಮರಾವತಿಯಿಂದ ಪಾಶ್ಚಾಪೂರದ ಪುರಾತನ ಅಕಾನಿಬಾಷಾ ದರ್ಗಾದ ಜೀರ್ಣೋದ್ಧಾರ ಕೆಲಸಕ್ಕೆ ಮಹಾರಾಷ್ಟ್ರದ ವಿಜಯ್ ಅಸೂಲ್ಕರ್ ಎಂಬ ವ್ಯಕ್ತಿ ಆಗಮಿಸಿದ್ದರು. ಕೆಲಸ ಮುಗಿದ ನಂತರ ವಾಪಸ್ ತಮ್ಮ ಊರಿಗೆ ರೈಲಿನಲ್ಲಿ ತೆರಳುವಾಗ ಆಕಸ್ಮಿಕವಾಗಿ ರೈಲಿನ ಚಕ್ರದಲ್ಲಿ ಕಾಲು ಸಿಕ್ಕಿಕೊಂಡು ಸಾವು-ಬದುಕಿನ ಮಧ್ಯೆ ವ್ಯಕ್ತಿ ಹೋರಾಟ ನಡೆಸುತ್ತಿದ್ದರು.
ಈ ವಿಷಯ ಯಮಕನಮರಡಿ ಶಾಸಕ ಮತ್ತು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿಯವರ ಕಿವಿಗೆ ಬಿದ್ದಿದೆ. ತಕ್ಷಣ ಗಾಯಗೊಂಡ ವ್ಯಕ್ತಿಯನ್ನು ಕಾರ್ಯಕರ್ತರ ಸಹಾಯದಿಂದ ಆಸ್ಪತ್ರೆಗೆ ಸೇರಿಸಿ ಅವರಿಗೆ ಸಂಪೂರ್ಣ ಗುಣಪಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ವ್ಯಕ್ತಿಯ ಜೀವ ಉಳಿಸಿ, ಚಿಕಿತ್ಸೆ ವೆಚ್ಚಕ್ಕಾಗಿ 1,00,000/- ಧನಸಹಾಯ ಮಾಡಿ ಮಾನವೀಯತೆ ಮೆರೆದಿದ್ದಾರೆ. ಇದೀಗ ವ್ಯಕ್ತಿ ಚೇತರಿಸಿಕೊಳ್ಳುತ್ತಿದ್ದಾರೆ.
ಜೊತೆಗೆ ಪಾಶ್ಚಾಪೂರ ಗ್ರಾಮದ ಸಮಾಜ ಸೇವಕ ಖಲೀಲ ಪೀರಜಾದೆ, ಸಯೀದ ಮಕಾನದಾರ, ಅಶ್ಪಾಕ ದರ್ಗಾ, ಫಜಲ್ ಮಕಾನದಾರ, ಬಾಬಾಸಾಬ ದರ್ಗಾ, ರಪೀಕ ಪೀರಜಾದೆ, ಜಾಕೀರ ದರ್ಗಾ ಮೊದಲಾದವರು ಗಾಯಾಳು ವ್ಯಕ್ತಿ ಚೇತರಿಸಿಕೊಳ್ಳಲು ಸತತ ಪ್ರಯತ್ನ, ಸಹಾಯ ಮಾಡಿದ್ದಾರೆ.
ಕ್ಷೇತ್ರದ ಗಡಿಯನ್ನು ಮೀರಿ ಮಾನವೀಯತೆಯ ದೃಷ್ಟಿಯಿಂದ ಸಹಾಯ ಮಾಡಿದ ಸತೀಶ್ ಜಾರಕಿಹೊಳಿ ಅವರಿಗೆ ಪಾಶ್ಚಾಪೂರ ಗ್ರಾಮಸ್ಥರು ಹಾಗೂ ಮುಸ್ಲಿಂ ಸಮಾಜ ಧನ್ಯವಾದಗಳನ್ನು ಅರ್ಪಿಸಿದೆ.