ಬೆಳಗಾವಿ: “ಭೂತರಾಮನಹಟ್ಟಿ ಮೃಗಾಲಯದಲ್ಲಿ ಹುಲಿ, ಸಿಂಹ ಸೇರಿದಂತೆ ಅನೇಕ ಪ್ರಾಣಿ, ಪಕ್ಷಿಗಳಿವೆ. ಆಸಕ್ತರು ಪ್ರಾಣಿಗಳನ್ನು ದತ್ತು ಪಡೆಯಬೇಕು” ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಮನವಿ ಮಾಡಿದ್ದಾರೆ.
ಸಮೀಪದ ಭೂತರಾಮನಹಟ್ಟಿ ಮೃಗಾಲಯಕ್ಕೆ ಇಂದು (ಭಾನುವಾರ) ಭೇಟಿ ನೀಡಿ, ಅಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯಗಳನ್ನು ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
“ಈಗಾಗಲೇ ಕೆಲವರು ಇಲ್ಲಿನ ಪ್ರಾಣಿಗಳನ್ನು ದತ್ತು ಪಡೆದಿದ್ದಾರೆ. ಮತ್ತೆ ಯಾರಾದರು ಆಸಕ್ತರು ಇದ್ದರೇ ಪ್ರಾಣಿಗಳನ್ನು ದತ್ತು ಪಡೆಯಲು ಮುಂದೆ ಬರಬೇಕು” ಎಂದರು.
“ಪ್ರಾಣಿ, ಪಕ್ಷಿಗಳನ್ನು ಸಾರ್ವಜನಿಕರು ದತ್ತು ಪಡೆದರೇ ಅವುಗಳ ನಿರ್ವಹಣೆಗೆ ಅನುಕೂಲವಾಗುತ್ತದೆ. ಪರಸರ ಅತ್ಯಂತ ಮುಖ್ಯ. ಪರಿಸರ ರಕ್ಷಣೆಗೆ ಎಲ್ಲರೂ ಕೈಜೋಡಿಸಬೇಕು” ಎಂದು ಮನವಿ ಮಾಡಿದರು.
ಮಾದರಿ ಮೃಗಾಲಯವಾಗಲಿದೆ:
“ನಾನು ಶಾಸಕನಾಗುವುದಕ್ಕಿಂತ ಮುಂಚೆಯೇ ಈ ಮೃಗಾಲಯ ಇತ್ತು. ಅತ್ಯಂತ ಚಿಕ್ಕದಾಗಿದ್ದ ಇದನ್ನು ಶಾಸಕನಾದ ನಂತರ ಸಾಕಷ್ಟು ಅಭಿವೃದ್ಧಿಪಡಿಸಲಾಗಿದೆ. ಇತ್ತೀಚೆಗೆ ಇಲ್ಲಿಗೆ ಹುಲಿ ಹಾಗೂ ಸಿಂಹಗಳನ್ನು ತರಲಾಗಿದೆ. ಸದ್ಯ ಇಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಮೈಸೂರಿನ ನಂತರದ ಅತಿದೊಡ್ಡ ಮೃಗಾಲಯದ ಇದಾಗಿದ್ದು, ಉತ್ತರ ಕರ್ನಾಟಕ ಭಾಗದ ಹೆಮ್ಮೆಯಾಗಿದೆ. ಇನ್ನು ಎರಡು, ಮೂರು ತಿಂಗಳಲ್ಲಿ ಇದೊಂದು ಮಾದರಿ ಮೃಗಾಲಯವಾಗಲಿದೆ” ಎಂದು ಭರವಸೆ ವ್ಯಕ್ತಪಡಿಸಿದರು.
“ಲಾಕ್ ಡೌನ್ ಮುಗಿದ ನಂತರ ಸಾರ್ವಜನಿಕರು ಮೃಗಾಲಯಕ್ಕೆ ಭೇಟಿ ನೀಡಬೇಕು. ಮೃಗಾಲಯ ಪ್ರಾಧಿಕಾರ ಹಾಗೂ ಅರಣ್ಯ ಇಲಾಖೆ ಯಾವ ರೀತಿ ಮೃಗಾಲಯವನ್ನು ಅಭಿವೃದ್ಧಿ ಪಡಿಸಿದೆ ಎಂಬುದನ್ನು ಗಮನಿಸಬೇಕು” ಎಂದು ಹೇಳಿದರು.
ಜಿಲ್ಲಾ ಪಂಚಾಯತ್ ಸದಸ್ಯ ಸಿದ್ದು ಸುಣಗಾರ, ಮುಖಂಡರಾದ ಸುರೇಶ ನಾಯ್ಕ್, ಮಾರುತಿ ಚೌಗಲಾ, ಡಿಎಫ್ಓ ಅಮರನಾಥ, ಆರ್ ಎಫ್ಓ ರಾಕೇಶ ಸೇರಿ ಇನ್ನಿತರರು ಇದ್ದರು.