ಬೆಳಗಾವಿ: “ಕೋವಿಡ್ ಮೂರನೇ ಅಲೆ ಎದುರಿಸಲು ಜಿಲ್ಲೆಯಲ್ಲಿ ಈಗಿನಿಂದಲೇ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿಗಳು ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸಲಹೆ ನೀಡಿದ್ದೇವೆ” ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ತಿಳಿಸಿದರು.
ನಗರದಲ್ಲಿ ಇಂದು ಜಿಲ್ಲಾಧಿಕಾರಿಗಳು ಹಾಗೂ ಬಿಮ್ಸ್ ನ ಅಧಿಕಾರಿಗಳನ್ನು ಭೇಟಿ ಮಾಡಿ ಚರ್ಚಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
“ಕೆಲವು ದಿನಗಳ ಹಿಂದೆ ಕಾಂಗ್ರೆಸ್ ನಿಯೋಗದೊಂದಿಗೆ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ, ಕೊರೊನಾ ನಿಯಂತ್ರಣಕ್ಕೆ ಸಲಹೆಗಳನ್ನು ನೀಡಲಾಗಿತ್ತು. ಅವುಗಳ ಅನುಷ್ಟಾನದ ಕುರಿತು ಇಂದು ಮಾಹಿತಿ ಪಡೆಯಲಾಯಿತು. ನಾವು ನೀಡಿದ್ದ ಸಲಹೆಗಳನ್ನು ಅಧಿಕಾರಿಗಳು ಅನುಷ್ಟಾನ ಮಾಡಿದ್ದಾರೆ. ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಪ್ರಮಾಣ ಕಡಿಮೆಯಾಗುತ್ತಿದೆ” ಎಂದು ಹೇಳಿದರು.
ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್ ಪರೀಕ್ಷೆ ಕೈಗೊಳ್ಳಿ:
ಕೋವಿಡ್ ತ್ವರಿತ ನಿಯಂತ್ರಣಕ್ಕಾಗಿ ಹೆಚ್ಚು ಹೆಚ್ಚು ಪರೀಕ್ಷೆಗಳನ್ನು ಕೈಗೊಳ್ಳುವಂತೆ ಸೂಚಿಸಲಾಗಿತ್ತು. ಇಂದಿನಿಂದ ಗ್ರಾಮಗಳಲ್ಲೂ ಪರೀಕ್ಷೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದು ಅಗತ್ಯವಾಗಿತ್ತು, ಜಿಲ್ಲೆಯ ಪ್ರತಿ ಹಳ್ಳಿಯಲ್ಲೂ ಪರೀಕ್ಷೆಗಳನ್ನು ಕೈಗೊಳ್ಳಬೇಕು. ಸೋಂಕಿತರಿಗೆ ಕೂಡಲೇ ಚಿಕಿತ್ಸೆ ಕೊಡಿಸಬೇಕು” ಎಂದರು.
“ಕೋವಿಡ್ ಮೂರನೇ ಅಲೆಯ ನಿಯಂತ್ರಣಕ್ಕಾಗಿ ಜಿಲ್ಲೆಯಲ್ಲಿ ಅಗತ್ಯ ಔಷಧಿ, ಆಕ್ಸಿಜನ್ ಹಾಗೂ ಬೆಡ್ ಗಳ ವ್ಯವಸ್ಥೆಯನ್ನು ಈಗಿನಿಂದಲೇ ಮಾಡಿಕೊಳ್ಳಬೇಕು” ಎಂದು ಹೇಳಿದರು.
ಬಿಮ್ಸ್ ಅಧಿಕಾರಿಗಳೊಂದಿಗೆ ಚರ್ಚೆ:
ಇದಕ್ಕೂ ಮುಂಚೆ ಬಿಮ್ಸ್ ನಲ್ಲಿ ಅಧಿಕಾರಿಗಳೊಂದಿಗೆ ಜಿಲ್ಲೆ ಹಾಗೂ ಯಮಕನಮರಡಿ ಕ್ಷೇತ್ರದಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಪಡೆದರು. ಕೆಲವು ಸೂಚನೆಗಳನ್ನು ಕೂಡ ನೀಡಿದರು.