ಚಿಕ್ಕೋಡಿ: ಸಮೀಪದ ಅಂಕಲಿ ಪಟ್ಟಣದ ಡಾ.ಎನ್.ಎ. ಮಗದುಮ್ ಆಯುರ್ವೇದಿಕ ಮೆಡಿಕಲ್ ಆಸ್ಪತ್ರೆ ಮತ್ತು ಸಂಶೋದನಾ ಕೇಂದ್ರದಲ್ಲಿ 120 ಬೆಡ್ ಗಳನ್ನು ಕೋವಿಡ್ ರೋಗಿಗಳಿಗಾಗಿ ಮೀಸಲಿಡಲಾಗಿದ್ದು, ಈ ಯೋಜನೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹಾಗೂ ಮಾಜಿ ಸಂಸದ ಪ್ರಕಾಶ ಹುಕ್ಕೇರಿ ಅವರು ಇಂದು ಚಾಲನೆ ನೀಡಿದರು.
“ಆಸ್ಪತ್ರೆಯೊಂದಿಗೆ ಸತೀಶ ಜಾರಕಿಹೊಳಿ ಅವರ ಸತೀಶ ಜಾರಕಿಹೊಳಿ ಫೌಂಡೇಶನ್ ಹಾಗೂ ಪ್ರಕಾಶ ಹುಕ್ಕೇರಿ ಮತ್ತು ಶಾಸಕ ಗಣೇಶ ಹುಕ್ಕೇರಿ ಅವರ ಅನ್ನಪೂರ್ಣೇಶ್ವರಿ ಫೌಂಡೇಶನ್ ಕೈಜೋಡಿಸಿವೆ. ಕೋವಿಡ್ ನಿಗ್ರಹಕ್ಕಾಗಿ ಎಲ್ಲ ರೀತಿಯ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಈ ಮುಖಂಡರು ಮುಂದೆ ಬಂದಿದ್ದಾರೆ” ಎಂದು ಆಸ್ಪತ್ರೆಯ ಡಾ.ಎಸ್.ಎಸ್. ಗಡೇದ ತಿಳಿಸಿದರು.
ಆಸ್ಪತ್ರೆಗೆ ಅಗತ್ಯ ನೆರವು:
ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಮಾತನಾಡಿ, “ಈ ಭಾಗದಲ್ಲಿ ಕೋವಿಡ್ ನಿಗ್ರಹಕ್ಕಾಗಿ ಮಗದುಮ್ ಆಸ್ಪತ್ರೆ ಟೊಂಕ ಕಟ್ಟಿ ನಿಂತಿದೆ. ಕಳೆದ ಬಾರಿ ಕೂಡ ಕೋವಿಡ್ ಸಂದರ್ಭದಲ್ಲಿ ಆಸ್ಪತ್ರೆ ಉತ್ತಮವಾಗಿ ಕಾರ್ಯನಿರ್ವಹಿಸಿದೆ. ಹೀಗಾಗಿ, ಆಸ್ಪತ್ರೆಯೊಂದಿಗೆ ನಾವು ಕೂಡ ಕೈಜೋಡಿಸಿದ್ದೇವೆ” ಎಂದು ಹೇಳಿದರು.
“ಎಲ್ಲರೂ ಬೆಳಗಾವಿ, ಬೆಂಗಳೂರಿಗೆ ಹೋಗಿ ಚಿಕಿತ್ಸೆ ಪಡೆಯಲು ಆಗುವುದಿಲ್ಲ. ಈ ಆಸ್ಪತ್ರೆಯಲ್ಲಿ ವ್ಯವಸ್ಥೆ ಉತ್ತಮವಾಗಿದೆ. ಇಲ್ಲಿನ ಸಿಬ್ಬಂದಿ ಕೂಡ ಮುತುವರ್ಜಹಿ ವಹಿಸಿ ಕೆಲಸ ಮಾಡುತ್ತಿದ್ದಾರೆ. ಗ್ರಾಮೀಣ ಭಾಗದ ಜನರಿಗೆ ಆಸ್ಪತ್ರೆಯಿಂದ ಅನುಕೂಲವಾಗಲಿದೆ” ಎಂದರು. ಆಸ್ಪತ್ರೆ ರಾಜ್ಯಕ್ಕೆ ಮಾದರಿಯಾಗಲಿ ಎಂದು ಸತೀಶ ಶುಭ ಹಾರೈಸಿದರು.
“ಮಾಜಿ ಸಂಸದ ಪ್ರಕಾಶ ಹುಕ್ಕೇರಿ ಹಾಗೂ ಶಾಸಕ ಗಣೇಶ ಹುಕ್ಕೆರಿ ಅವರು ಕೋವಿಡ್ ಸಂದರ್ಭದಲ್ಲಿ ಜನರಿಗೆ ಸಾಕಷ್ಟು ನೆರವು ಕಲ್ಪಿಸಿದ್ದಾರೆ. ಈಗಲೂ ಜನರಿಗೆ ಸಹಾಯ ಮಾಡಲು ಅವರು ಮುಂದೆ ಬಂದಿದ್ದಾರೆ. ಸಾರ್ವಜನಿಕರು ಆಸ್ಪತ್ರೆಯ ಪ್ರಯೋಜನ ಪಡೆಯಬೇಕು” ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಸಂಸದ ಪ್ರಕಾಶ ಹುಕ್ಕೇರಿ, ಶಾಸಕ ಗಣೇಶ ಹುಕ್ಕೇರಿ, ಎಐಸಿಸಿ ಗೋವಾ ವೀಕ್ಷಕ ಸುನೀಲ ಹನುಮಣ್ಣವರ, ಮಾಜಿ ಸಚಿವ ವೀರಕುಮಾರ ಪಾಟೀಲ, ಎಸ್.ಬಿ. ಘಾಟಗೆ ಮಹಾವೀರ ಮೊಹಿತೆ, ಲಕ್ಷ್ಮಣರಾವ್ ಚಿಂಗಳೆ, ಡಾ.ಎಸ್.ಎಸ್. ಗಡೇದ ಇದ್ದರು.