ಬೈಲಹೊಂಗಲ : ‘ ದೇಶದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸುಳ್ಳು ಹೇಳುವುದಕ್ಕೆ ನೋಬೆಲ್ ಪ್ರಶಸ್ತಿಯನ್ನು ನೀಡಬೇಕು ಎಂದು ಬೆಳಗಾವಿ ಲೋಕಸಭಾ ಮತಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ವ್ಯಂಗ್ಯವಾಡಿದರು.
ನಗರದಲ್ಲಿ ಇಂದು ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿ, ‘ನರೇಂದ್ರ ಮೋದಿ ಅವರ ಏಳು ವರ್ಷಳಿಂದಲೂ ಸುಳ್ಳುಗಳನ್ನೇ ಹೇಳಿಕೊಂಡು ಬಂದಿದ್ದಾರೆ. ಹಿಂದಿನ ಅವರ ಭಾಷಣಗಳನ್ನು ಒಮ್ಮೆ ಕೇಳಿದರೆ ಗೊತ್ತಾಗಲಿದೆ. ಪ್ರಧಾನಿ ಮೋದಿ ಸುಳ್ಳು ಹೇಳಿ, ದೇಶದ ಜನರ ದಾರಿ ತಪ್ಪಿಸಿದ್ದಾರೆ ಎಂದರು.
ಕೇಂದ್ರ ಸರ್ಕಾರ ದಿನಬಳಕೆ ವಸ್ತುಗಳು, ತೈಲ, ಸಿಲಿಂಡರ್ ಜೊತೆಗೆ ನಿನ್ನೆ ರೈತರ ಗೊಬ್ಬರದ ಬೆಲೆಯನ್ನು 700 ರೂಪಾಯಿಗೆ ಏರಿಕೆ ಮಾಡಿದ್ದಾರೆ. ನಮ್ಮ ಸರ್ಕಾರದ ಅವಧಿಯಲ್ಲಿ 400 ರೂಪಾಯಿ ಇತ್ತು. ಒಮ್ಮೆಲೆ ಬೆಲೆ ಹೆಚ್ಚಿಗೆ ಮಾಡಿದ್ದಾರೆ. ಇದು ಜನರಿಗೆ , ರೈತರಿಗೆ ತೊಂದರೆಯಾಗಲಿದೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
‘ಮೋದಿಯ ಸುಳ್ಳಿನ ಮಾತುಗಳಿಗೆ ಮರುಳಾಗಬೇಡಿ, ಜನರು ಸಹ ಎಚ್ಚತ್ತುಕೊಳ್ಳಬೇಕು. ಬಿಜೆಪಿ ಸರ್ಕಾರ ಜನ ವಿರೋಧಿ ಆಡಳಿತ ನಡೆಸುತ್ತಿದೆ. ಉಪಚುನಾವಣೆ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ಗಂಟೆಯಾಗಬೇಕು. ಈ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ, ನಿಮ್ಮ ಸೇವೆ ಮಾಡಲು ನಮಗೂ ಅವಕಾಶ ನೀಡಬೇಕು’ ಎಂದು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ, ಸತೀಶ್ ಜಾರಕಿಹೊಳಿ ಅವರಿಗೆ ಕರಿ ಕಂಬಳಿ ,ಹೂ ಮಾಲೆ ಹಾಕಿ ಸನ್ಮಾನಿಸಿದರು. ಹಿರಿಯ ಮುಖಂಡರಾದ ಎಂ.ಬಿ. ಪಾಟೀಲ, ಎಸ್.ಆರ್. ಪಾಟೀಲ, ಕೆ.ಎಚ್. ಮುನಿಯಪ್ಪ, ಎಚ್.ರುದ್ರಪ್ಪ, ಮಹಾಂತೇಶ ಕೌಜಲಗಿ, ಎಚ್. ರೇವಣ್ಣ, ಶಿವಣ್ಣ, ಎಚ್. ಚಂದ್ರಶೇಖರ್, ಐವನ್ ಡಿಸೋಜ್, ರಾಮಲಿಂಗಾರೆಡ್ಡಿ, ಪ್ರಕಾಶ ಹುಕ್ಕೇರಿ, ಡಾ.ವಿ.ಎಸ್. ಸಾಧುನವರ, ವಿನಯ ನಾವಲಗಟ್ಟಿ ಸೇರಿ ಮಾಜಿ ಶಾಸಕರು, ಮುಖಂಡರು ಇದ್ದರು.