ಗೋಕಾಕ : ನಗರದಲ್ಲಿ ಬೆಳಗಾವಿ ಲೋಕಸಭಾ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಪರ ಯುವ ನಾಯಕಿ ಪ್ರಿಯಾಂಕಾ ಜಾರಕಿಹೊಳಿ ಬುಧವಾರ ಅಬ್ಬರದ ಪ್ರಚಾರ ಆರಂಭಿಸಿದರು.
ಬೆಳಗ್ಗೆಯಿಂದಲೇ ತಂದೆ ಪರ ಮತಬೇಟೆ ಆರಂಭಿಸಿದ ಪ್ರಿಯಾಂಕಾ, ಮೊದಲು ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿರುವ ರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ನಂತರ ನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಸಂಚರಿಸಿ, ತಂದೆ ಪರ ಮತಯಾಚಿಸಿದರು.
‘ ಸರಳ ವ್ಯಕ್ತಿತ್ವ ಉಳ್ಳ ನನ್ನ ತಂದೆಯವರಿಗೆ ಮತ ನೀಡಬೇಕು. ಈಗಾಗಲೇ ಸುಮಾರು 30 ವರ್ಷಗಳಿಂದ ನಿಮ್ಮ ಸೇವೆ ಮಾಡಲು ಅವಕಾಶ ನೀಡಿದ್ದೀರಿ. ಅದೇ ರೀತಿ ಲೋಕಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ, ತಂದೆಯನ್ನು ಗೆಲ್ಲಿಸಬೇಕು’ ಎಂದು ಮನವಿ ಮಾಡಿದರು.
‘ ಬೆಳಗಾವಿ ಜಿಲ್ಲೆಯ ಅಭಿವೃದ್ಧಿಗೆ ತಂದೆ ಪಣ ತೊಟ್ಟಿದ್ದಾರೆ. ಅವರಿಗೆ ಬೆಂಬಲಿಸಿದರೆ, ಬೆಳಗಾವಿ ಜಿಲ್ಲೆಯನ್ನು ರಾಜ್ಯದಲ್ಲಿಯೇ ಮಾದರಿ ನಗರವನ್ನಾಗಿಸುತ್ತಾರೆ. ಇದಕ್ಕೆ ನಿಮ್ಮ ಬೆಂಬಲ, ಸಹಕಾರ ಅವಶ್ಯ’ ಎಂದರು.
ಇದೇ ವೇಳೆ ಜೈನ ಬಸ್ತಿಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರು, ನೂರಾರು ಕಾರ್ಯಕರ್ತರು ಇದ್ದರು.