ಗೋಕಾಕ ಡಿ 23 : ದೇಶದಲ್ಲಿ ವಿವಿಧ ಧರ್ಮಾಚರಣೆಗಳು ಬೇರೆ ಬೇರೆ ರೀತಿಯಲ್ಲಿ ಆಚರಿಸುತ್ತಿದ್ದರೂ ಆರಾಧಿಸುವ ದೇವರು ಒಬ್ಬನಾಗಿದ್ದಾನೆ ಎಂದು ಯುವ ಧುರೀಣ ಸರ್ವೋತ್ತಮ ಜಾರಕಿಹೊಳಿ ಹೇಳಿದರು.
ಇಲ್ಲಿನ ಎನ್ಎಸ್ಎಫ್ ಗೆಸ್ಟ್ ಹೌಸ್‌ನಲ್ಲಿ ಶುಕ್ರವಾರ ಗೋಕಾಕ್- ಮೂಡಲಗಿ ತಾಲ್ಲೂಕು ಕ್ರೈಸ್ತ ಸಮುದಾಯದ ಬಾಂಧವರು ಹಮ್ಮಿಕೊಂಡ ಕ್ರೀಸ್ಮಸ್ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ದೇವರು ಒಬ್ಬನಾಗಿದ್ದು, ನಾಮಗಳು ಹಲವುಗಳಿವೆ ಎಂದು ತಿಳಿಸಿದರು.
ಏಸುಕ್ರಿಸ್ತ ಜಗತ್ತಿಗೆ ಶಾಂತಿಯ ಸಂದೇಶಗಳನ್ನು ಸಾರಿದ್ದಾರೆ. ಪ್ರೀತಿಯ ಬೋಧನೆಗಳನ್ನು ಮಾಡಿದ್ದಾರೆ. ಅವರ ಆದರ್ಶಗಳನ್ನು ಇಂದಿನ ಯುವ ಜನಾಂಗ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ದುಶ್ಚಟಗಳನ್ನು ಬಿಟ್ಟು
ಮಹಾತ್ಮರು ಹೇಳಿದಂತೆ ಮುನ್ನಡೆಯಬೇಕು. ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಂದ ಅರಭಾವಿ ಕ್ಷೇತ್ರ ನಂದನವನ ಆಗುತ್ತಿದೆ. ಇದಕ್ಕೆ ಎಲ್ಲ ಸಮಾಜಗಳ ಜನರು ನೀಡುತ್ತಿರುವ ಪ್ರೀತಿ
ವಿಶ್ವಾಸವೇ ಕಾರಣವೆಂದು ಹೇಳಿದರು.
ಅಧ್ಯಕ್ಷತೆಯನ್ನು ಮೂಡಲಗಿ ಸಭಾಪಾಲಕ ಡ್ಯಾನ್ಯೂಲ್ ಬಾಬು ವಹಿಸಿದ್ದರು.
ಈ ಸಂದರ್ಭದಲ್ಲಿ ಕ್ರೈಸ್ತ ಮುಖಂಡ ವಾಯ್. ಆರ್. ಕರಬನ್ನವರ, ಡಿಎಸ್ಎಸ್ ಮುಖಂಡರಾದ ರಮೇಶ ಮಾದರ, ಸತ್ತೆಪ್ಪ ಕರಬನ್ನವರ, ಬಸವರಾಜ ಕಾಡಾಪೂರ, ಶಾಸಕರ ಆಪ್ತ ಸಹಾಯಕ ನಾಗಪ್ಪ ಶೇಖರಗೋಳ, ನಿಂಗಪ್ಪ ಕುರಬೇಟ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಡಿ. 25 ರಂದು ನಡೆಯುವ ಕ್ರಿಸ್ಮಸ್ ದಿನಾಚರಣೆ ನಿಮಿತ್ಯ ಕೇಕ್ ಕತ್ತರಿಸಿ ಶುಭ ಕೋರಲಾಯಿತು. ಉಭಯ ತಾಲೂಕುಗಳ ಎಲ್ಲ ಸಭಾ ಪಾಲಕರು ಹಾಜರಿದ್ದರು.