*ಮಹರ್ಷಿ ಶ್ರೀ ವಾಲ್ಮೀಕಿ ದೇವಸ್ಥಾನಕ್ಕೆ ಯುವ ನಾಯಕಿ ಪ್ರಿಯಾಂಕಾ ಜಾರಕಿಹೊಳಿ ಭೇಟಿ*
ಗೋಕಾಕ : ನಗರದ ಕರ್ನಾಟಕ ಸರ್ಕಾರ, ತಾಲೂಕು ಪಂಚಾಯತ್, ನಗರಸಭೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಗೋಕಾಕ ಇವರ ಸಂಯುಕ್ತಾಶ್ರಯದಲ್ಲಿ ಗೋಕಾಕ ಮಹರ್ಷಿ ವಾಲ್ಮೀಕಿ ದೇವಸ್ಥಾನದ ಆವರಣದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ನಡೆಯಿತು.
ಈ ಸಂದರ್ಭದಲ್ಲಿ ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ ಅವರು ಮಾತನಾಡಿ ಜಗತ್ತಿನ ಶ್ರೇಷ್ಠ ಕಾವ್ಯಗಳಲ್ಲಿ ಒಂದಾದ ರಾಮಾಯಣ ರಚಿಸಿದ ವಾಲ್ಮೀಕಿ ಮಹರ್ಷಿಗಳು ಇಡೀ ವಿಶ್ವಕ್ಕೆ ರಾಮರಾಜ್ಯದ ಪರಿಕಲ್ಪನೆಯನ್ನು ಪರಿಚಯ ಮಾಡಿಕೊಟ್ಟ ಮಹಾನ್ ದಾರ್ಶನಿಕ. ಮಹಾನ್ ಕವಿಯಾಗಿದ್ದು ಪ್ರಜೆಗಳನ್ನು ಯಾವ ರೀತಿ ರಕ್ಷಿಸಬೇಕು, ಯಾವ ರೀತಿ ಆಡಳಿತ ನಡೆಸಬೇಕು ಎಂಬುದರ ಕುರಿತು ಪ್ರಜಾಪ್ರಭುತ್ವದ ಸಮಗ್ರ ಪರಿಕಲ್ಪನೆಯನ್ನು ರಾಮಾಯಣದ ಮೂಲಕ ಇಡೀ ಜಗತ್ತಿಗೆ ತೋರಿಸಿಕೊಟ್ಟ ಮಹಾಕವಿ ಮಹರ್ಷಿ ವಾಲ್ಮೀಕಿ ಅವರು ಇಂದಿನ ಯುವ ಜನತೆಗೆ ಮಾದರಿಯಾಗಿದ್ದಾರೆ, ಅವರ ದಾರಿಯಲ್ಲಿ ಯುವ ಜನತೆ ಸಾಗಿ ಎಂದು ಕರೆ ನೀಡಿದರು.
ನಂತರ ಯುವ ನಾಯಕಿ ಪ್ರಿಯಾಂಕಾ ಜಾರಕಿಹೊಳಿ ಅವರು ಮಾತನಾಡಿ ಸಾಮಾನ್ಯ ವ್ಯಕ್ತಿಯೊಬ್ಬ ಮಹಾನ್ ಕಾವ್ಯ ರಚಿಸುವಷ್ಟರ ಮಟ್ಟಿಗೆ ತಪಸ್ಸು ಮಾಡಿ ಜ್ಞಾನ ಸಂಪಾದನೆ ಮಾಡಿದ ಮಹರ್ಷಿ ವಾಲ್ಮೀಕಿ, ಅಜ್ಞಾನದಿಂದ ಸುಜ್ಞಾನದೆಡೆಗೆ ಸಾಗುವ ದಾರಿಯನ್ನು ತೋರಿಸಿಕೊಟ್ಟ ಇಂತಹ ಮೇರು ವ್ಯಕ್ತಿ ಈ ಪುಣ್ಯ ಭೂಮಿಯಲ್ಲಿ ಜನಿಸಿದ್ದು ನಾವೆಲ್ಲಾ ಹೆಮ್ಮೆ ಪಡುವಂತಹದ್ದು. ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಮಾಡುವುದರ ಜೊತೆಗೆ ಪ್ರತಿಯೊಬ್ಬರು ಅದರಲ್ಲೂ ಯುವಜನತೆ ಮತ್ತು ವಿದ್ಯಾರ್ಥಿಗಳು ಅವರು ರಚಿಸಿರುವ ರಾಮಾಯಣವನ್ನು ಓದಿ ಮೈಗೂಡಿಸಿಕೊಳ್ಳಬೇಕು ಎಂದರು.
ನಂತರ ಮಲ್ಲಪ್ಪ ಗುಡ್ಡಾಕಾಯ ಹಾಗೂ ಯುವಕರ ಸಂಘವು ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ ಹಾಗೂ ಯುವ ನಾಯಕಿ ಪ್ರಿಯಾಂಕಾ ಜಾರಕಿಹೊಳಿ ಅವರಿಗೆ ಸತ್ಕಾರ ಮಾಡಿದರು.
ಈ ಸಂದರ್ಭದಲ್ಲಿ ತಾಲೂಕು ಆಡಳಿತ ಮಂಡಳಿ ಹಾಗೂ ಸಮಾದ ಹಿರಿಯರು ಯುವಕರು ಉಪಸ್ಥಿರಿದ್ದರು.