ಗೋಕಾಕ: 12ನೇ ಶತಮಾನದ ವಿಷಮ ಪರಿಸ್ಥಿತಿಯಲ್ಲಿ ಜಾತ್ಯಾತೀತ ಸಮಾಜ ನಿರ್ಮಾಣ, ಮಹಿಳೆಯರಿಗೆ ಸಮಾನತೆ ನೀಡಿ ಸಾಮಾಜಿಕ ಬದಲಾವಣೆ ತರಲು ಶ್ರಮಿಸಿದ ವ್ಯಕ್ತಿ ಬಸವಣ್ಣನವರು. ಪ್ರಸ್ತುತ ಸಮಾಜದಲ್ಲಿ ಬಸವಣ್ಣನವರ ಚಿಂತನೆ, ಆಚಾರ-ವಿಚಾರಗಳು, ತತ್ತ್ವಾದರ್ಶಗಳ ಪಾಲನೆ ಆಗಬೇಕು ಎಂದು ಯುವ ನಾಯಕ ರಾಹುಲ್ ಜಾರಕಿಹೊಳಿ ಹೇಳಿದರು.
ತಾಲೂಕಿನ ರಡೇರಟ್ಟಿ ಗ್ರಾಮದಲ್ಲಿ ವಿಶ್ವ ಗುರು ಜಗಜ್ಯೋತಿ ಬಸವೇಶ್ವರ ಪ್ರತಿಮೆ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣ ಸಮಾರಂಭದಲ್ಲಿ ಮಾತನಾಡಿದ ಅವರು, ಬಸವಣ್ಣನವರು ಸುಂದರ ಸಮಾಜದ ಪರಿಕಲ್ಪನೆ ಹೊಂದಿದ್ದರು. ದೇಶದಲ್ಲಿ ಅಸಮಾನತೆ ಹೊಗಲಾಡಿಸಲು ಶ್ರಮಿಸಿದ ಬುದ್ಧ, ಬಸವ, ಡಾ. ಅಂಬೇಡ್ಕರ್ ಅವರನ್ನು ಇಂದಿನ ಯುವ ಪೀಳಿಗೆ ನೆನೆಯುವ ಕೆಲಸ ಮಾಡಬೇಕಿದೆ ಎಂದರು.
ಯುವ ಮುಖಂಡ ಸರ್ವೋತ್ತಮ ಜಾರಕಿಹೊಳಿ ಮಾತನಾಡಿ, ಎಲ್ಲಾ ಸಮಾಜದ ಬಾಂಧವರು ಒಗ್ಗಟ್ಟಾಗಿ ಮಹಾತ್ಮರ ಜಯಂತಿ ಆಚರಣೆ ಮಾಡಿದಾಗ ಮಾತ್ರ ನಾವು ಮಹಾತ್ಮರಿಗೆ ಗೌರವ ನೀಡಿದಂತೆ ಆಗುತ್ತದೆ ಎಂದ ಅವರು, ಇಂದು ಗ್ರಾಮದಲ್ಲಿ ಬಸವಣ್ಣವರ ಮೂರ್ತಿ ಸ್ಥಾಪನೆ ಮಾಡಿದರೆ ಸಾಲದು, ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ನಿಡಸೋಶಿಯ ದುರದುಂಡೇಶ್ವರ ಮಠದ ಶ್ರೀ ಮ.ನಿ.ಜಗದ್ಗುರು ಶ್ರೀ ಪಂಚಮ ಶಿವಲಿಂಗೇಶ್ವರ ಮಹಾ ಸ್ವಾಮೀಜಿಗಳು, ಬಸವರಾಜ ಸ್ವಾಮೀಜಿ, ಶ್ರೀ ಮ.ನಿ.ಪ್ರ ಕುಮಾರ ವಿರೂಪಾಕ್ಷ ಮಹಾಸ್ವಾಮೀಜಿಗಳು ಸೇರಿದಂತೆ ಡಾ. ರಾಜೇಂದ್ರ ಸಣ್ಣಕ್ಕಿ, ಶಿವು ಪಾಟೀಲ, ರಾಮಣ್ಣ ಮಹಾರಡ್ಡಿ, ಸುಭಾಷ ಪಾಟೀಲ್, ರವಿ ಪರುಶೆಟ್ಟಿ, ಮಹೇಶ ಪಟ್ಟಣಶೆಟ್ಟಿ ಸೇರಿದಂತೆ ರಡೇರಟ್ಟಿ ಗ್ರಾಮದಲ್ಲಿ ಮುಖಂಡರು, ಸಾರ್ವಜನಿಕರು ಉಪಸ್ಥಿತರಿದ್ದರು.