ಗೋಕಾಕ: ನಗರದ ಹೆಸರಾಂತ ಹಾಸ್ಯ ಕಲಾವಿದ ಶಿವು ಪೂಜೇರಿ (34) ಅವರು ನಿನ್ನೆ ರಾತ್ರಿ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಸಂಕೇಶ್ವರ-ನರಗುಂದ ರಾಜ್ಯ ಹೆದ್ದಾರಿಯಲ್ಲಿ ಶಿವು ಅವರು ಘಟಪ್ರಭಾದಿಂದ ಗೋಕಾಕಗೆ ಬೈಕ್ ನಲ್ಲಿ ಆಗಮಿಸುತ್ತಿದ್ದಾಗ ಘಟಪ್ರಭಾದ ರಾಷ್ಟ್ರೀಯ ಸೇವಾದಳ ಕೇಂದ್ರದ ಬಳಿ ಬೈಕ್ ಮತ್ತು ಟಂಟಂ ನಡುವೆ ಅಪಘಾತ ಸಂಭವಿಸಿ, ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.
ಗೋಕಾಕ ನಗರದ ನಿವಾಸಿಯಾಗಿರುವ ಅವರಿಗೆ ಪತ್ನಿ, ಓರ್ವ ಪುತ್ರ, ಪುತ್ರಿ ಹಾಗೂ ಅಪಾರ ಬಂಧುಬಳಗ ಇದ್ದಾರೆ.
ಹೆಸರಾಂತ ಹಾಸ್ಯ ಕಲಾವಿದ:
ಶಿವು ಪೂಜೇರಿ ಅವರು ಕಳೆದ 20 ವರ್ಷಗಳಿಂದ ಸತೀಶ ಶುಗರ್ಸ್ ಅವಾರ್ಡ್ ಸೇರಿದಂತೆ ರಾಜ್ಯಾಧ್ಯಂತ ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ತಮ್ಮ ಹಾಸ್ಯದ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿದ್ದರು. ಖ್ಯಾತ ಹಾಸ್ಯ ಕಲಾವಿದ ನರಸಿಂಹರಾವ್ ಜೋಶಿ ಅವರೊಂದಿಗೆ ಅನೇಕ ಹಾಸ್ಯ ಕಾರ್ಯಕ್ರಮಗಳನ್ನು ಶಿವು ನೀಡಿದ್ದರು.
ಸತೀಶ ಜಾರಕಿಹೊಳಿ ಸಂತಾಪ:
ಶಿವು ಪೂಜೇರಿ ಅವರ ಅಕಾಲಿಕ ನಿಧನಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
“ಶಿವು ಅವರು ಒಬ್ಬ ಯುವ ಕಲಾವಿದರಾಗಿದ್ದರು. ಅನೇಕ ಹಾಸ್ಯ ಕಾರ್ಯಕ್ರಮಗಳನ್ನು ನೀಡಿ, ಜನರನ್ನು ನಗಿಸುವ ಕಾರ್ಯ ಮಾಡುತ್ತಿದ್ದರು. ಅವರ ನಿಧನದಿಂದ ಕಲಾ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ” ಎಂದಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬದವರಿಗೆ ದುಃಖ ಸಹಿಸಿಕೊಳ್ಳುವ ಶಕ್ತಿ ದೊರೆಯಲಿ ಎಂದು ಆಶಿಸಿದ್ದಾರೆ.
ಸತೀಶ ಶುಗರ್ಸ್ ತಂಡದ ಎಲ್ಲ ಸದಸ್ಯರು ಶಿವು ಅವರ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿ, ಕಂಬನಿ ಮಿಡಿದಿದ್ದಾರೆ.