ಘಟಪ್ರಭಾ: ಯುವ ಸಮುದಾಯ ಅಧ್ಯಾತ್ಮೀಕ ಕಾರ್ಯಗಳಲ್ಲಿ ಪಾಲ್ಗೊಳ್ಳಬೇಕು ಎಂದು ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ ಹೇಳಿದರು.
ಅವರು ಗುರುವಾರದಂದು ಹುಣಶ್ಯಾಳ ಪಿಜಿ ಸಿದ್ಧಲಿಂಗ ಕೈವಲ್ಯಾಶ್ರಮದಲ್ಲಿ ನಡೆಯುತ್ತಿರುವ ೨೬ನೇ ಸತ್ಸಂಗ ಮಹೋತ್ಸವ ಮತ್ತು ಸಿದ್ದಲಿಂಗೇಶ್ವರ ಜಾತ್ರಾ ಹಾಗೂ ತುಲಾಭಾರ ಸೇವೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಶ್ರೀಮಠದ ನಿಜಗುಣ ದೇವರಲ್ಲಿ ಸಹೋದರತ್ವ ಭಾವನೆವಿದೆ. ಅವರ ಜ್ಞಾನದ ಆಶೀರ್ವಾದ ನಾವೆಲ್ಲರೂ ಪಡೆದುಕೊಂಡು ಪುಣ್ಯವಂತರಾಗಬೇಕು. ಪ್ರೀತಿ ಮತ್ತು ಸಹೋದರತ್ವದ ವಿಚಾರಗಳನ್ನು ಬೆಳೆಸಿಕೊಂಡು ಮಠಮಾನ್ಯಗಳ ಕಾರ್ಯಕ್ರಮಗಳಲ್ಲಿ ಯುವಜನತೆ ಭಾಗವಹಿಸಬೇಕು. ಯುವ ಜನತೆ ಪುಣ್ಯಮಯ ಕಾರ್ಯಗಳಲ್ಲಿ ಪಾಲ್ಗೊಳ್ಳಬೇಕು.
ಶ್ರೀಮಠವು ಧಾರ್ಮಿಕ ಕಾರ್ಯಕ್ರಮವನ್ನು ಮಾಡುತ್ತಾ ನಾಡಿನ ಸಮಸ್ತ ಭಕ್ತವೃಂದಕ್ಕೆ ಆಶೀರ್ವಾದ ನೀಡುತ್ತಾ ಬಂದಿದೆ. ಅವರ ಜೊತೆಗೆ ನಮ್ಮ ಜಾರಕಿಹೊಳಿ ಮನೆತನವು ಸದಾ ಇರುತ್ತೇವೆ ಎಂದರಲ್ಲದೇ ಗುರುಗಳ ಅಪೇಕ್ಷೆಗಿಂತ ಭಕ್ತರು ನಿಷ್ಕಲ ಮನಸ್ಸಿನಿಂದ ಕಾರ್ಯ ಮಾಡಿದರೆ ಗುರುವಿನ ಆಶೀರ್ವಾದ ಸದಾ ಇರುತ್ತದೆ. ಮನುಷ್ಯನಿಗೆ ಯಾವುದೇ ಕಷ್ಟ ಬಂದರೂ ಸಹ ಗುರು ಅದನ್ನು ದೂರಮಾಡುತ್ತಾನೆ. ಗುರುವಿನ ಸೇವೆ ಅತೀಅಮೂಲ್ಯವಾದದ್ದು ಅದನ್ನು ಸದುಪಯೋಗ ಪಡಿಸಿಕೊಂಡರೆ ಮನುಷ್ಯ ಜನ್ಮವು ಪಾವನವಾಗುತ್ತದೆ. ಭಕ್ತಿ,ಶೃದ್ಧೆಯಿಂದ ಗುರುವಿನಲ್ಲಿ ಕಾಣಬೇಕೆಂದರು.
ಜಮಖಂಡಿಯ ಶಾಸಕ ಜಗದೀಶ ಗುಡಗಂಟಿ ಮಾತನಾಡಿ ಶ್ರೀ ನಿಜಗುಣ ದೇವ ಮಹಾಸ್ವಾಮಿಗಳು ಸದ್ಗರುಗಳ ಕೃಪಾ ಬಲದಿಂದ ಅಭೂತ ಪೂರ್ವ ಎನ್ನುವ ರೀತಿಯಲ್ಲಿ ಶ್ರೀ ಸಿದ್ದಲಿಂಗ ಕೈವಲ್ಯಾಶ್ರಮ ನಿರ್ಮಿಸಿ, ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ, ಆಧ್ಯಾತ್ಮಿಕ ಸಂಘಟನೆ ಮಾಡಿ ನಿಂತ ನೆಲ ಸುಕ್ಷೇತ್ರವಾಗಿರಿಸಿದ್ದಾರೆ ಎಂದರು.
ವೇದಿಕೆ ಮೇಲೆ ಶ್ರೀಮಠದ ನಿಜಗುಣ ದೇವ ಮಹಾಸ್ವಾಮಿಗಳು, ಕೃಪಾನಂದ ಮಹಾಸ್ವಾಮಿಜಿ,ಕೊಟಬಾಗಿಯ ಪ್ರಭುದೇವ ಸ್ವಾಮಿಜಿ, ಮಾತೋಶ್ರೀ ಅನುಸೂಯಾದೇವಿ, ಮಾತೋಶ್ರೀ ಸಿದ್ದೇಶ್ವರಿ ತಾಯಿಯವರು, ಸಿದ್ಧಾನಂದ ಮಹಾಸ್ವಾಮಿಜಿ, ಲಿಂಗನೂರಿನ ಶಿವಪುತ್ರ ಅವಧೂತರು ಸೇರಿದಂತೆ ಅನೇಕ ಮಹಾತ್ಮರು ಉಪಸ್ಥಿತರಿದ್ದರು.