ಸವದತ್ತಿ: ಮುಜರಾಯಿ ಇಲಾಖೆಯ ದತ್ತಿ ಸಮೀಕ್ಷಾ ಅಧಿಕಾರಿ ಕೆ. ಜಯಪ್ರಕಾಶ್ ಅವರು ಸವದತ್ತಿಯ ರೇಣುಕಾ ಯಲ್ಲಮ್ಮದೇವಿ ದೇವಸ್ಥಾನಕ್ಕೆ ಬುಧವಾರ ಭೇಟಿ ನೀಡಿ, ಪ್ರಗತಿ ಪರಿಶೀಲನೆ ನಡೆಸಿದರು.
ದೇವಸ್ಥಾನದ ಜಮೀನು, ಜಮೀನಿನ ದಾಖಲೆಗಳ ನಿರ್ವಹಣೆ, ಸಮಚ್ಚಯಗಳ ಪ್ರಾಂಗಣದಲ್ಲಿ ಸ್ವಚ್ಛತೆ ಕಾಪಾಡುವ ಬಗ್ಗೆ ಹಾಗೂ ಭಕ್ತರ ಧಾರ್ಮಿಕ ಕೈಂಕರ್ಯಗಳಿಗೆ ಅನುಕೂಲವಾಗುವಂತೆ ಮೂಲಸೌಕರ್ಯಗಳನ್ನು ಕಲ್ಪಿಸಲು ಸೂಚಿಸಿದರು.
ದೇವಸ್ಥಾನಕ್ಕೆ ಸೇರಿದ ಒಟ್ಟು 1,146 ಎಕರೆ 25 ಗುಂಟೆ ಜಾಗವಿದೆ. ಇದರಲ್ಲಿ ಕಂದಾಯ ಹಾಗೂ ಭೂಮಾಪನಾ ಇಲಾಖೆ ದಾಖಲೆಗಳಲ್ಲಿ ಅಗತ್ಯ ನಡಾವಳಿಗಳನ್ನು ಜರುಗಿಸಿ ಕೆಲವು ಭಾಗದ ಜಮೀನುಗಳ ದಾಖಲೆಗಳನ್ನು ಉನ್ನತೀಕರಿಸಿಕೊಂಡು ನಿರ್ವಹಣೆ ಮಾಡುವಂತೆ ಸೂಚಿಸಿದರು.
ದೇವಾಲಯದಿಂದ 246 ಕೊಠಡಿಗಳ ಅತಿಥಿಗೃಹ ನಿರ್ಮಾಣ ಕಾಮಗಾರಿ ಅಂತಿಮ ಹಂತದಲ್ಲಿದೆ.
ಆದರೆ, ಕೆಲವು ಕಾಮಗಾರಿ 16 ತಿಂಗಳಿಂದ ಬಾಕಿ ಇದೆ. ಈ ಬಗ್ಗೆ ಲೋಕೋಪಯೋಗಿ ಇಲಾಖೆ ಎಇಇ ಜೊತೆ ಚರ್ಚಿಸಿದರು. ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸದಿದ್ದಲ್ಲಿ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು ಎಂದು ಎಚ್ಚರಿಸಿದರು.
ಕೆಆರ್‌ಐಡಿಎಲ್‌ನಿಂದ ಬಾಕಿ ಇರುವ 8 ಕಾಮಗಾರಿಗಳ ಗುಣಮಟ್ಟದ ಬಗ್ಗೆ ತಗಾದೆ ಇರುವುದರಿಂದ ಈ ಬಗ್ಗೆ ಗುಣಮಟ್ಟ ಪರೀಕ್ಷಿಸಲು ಲೋಕೋಪಯೋಗಿ ಇಲಾಖೆ ಮುಖ್ಯ ಎಂಜಿನಿಯರ್ (ಗುಣಮಟ್ಟ ನಿರ್ವಹಣೆ) ಅವರನ್ನು ಕೋರಲು ಧಾರ್ಮಿಕ ದತ್ತಿ ಇಲಾಖೆ ಎಇಇಗೆ ಸೂಚಿಸಿದರು.
ದೇವಸ್ಥಾನಕ್ಕೆ ಸಂಬಂಧಿಸಿದ ಜಾಗದಲ್ಲಿ ಹಸಿರೀಕರಣ ನಡೆಸಲು ಪ್ರಸ್ತಾವ ಕಳುಹಿಸಲು ಎಸಿಎಫ್‌ಗೆ ಕೋರಿದರು.
ಒಟ್ಟು ಆಸ್ತಿ ಮತ್ತು ದಾಖಲೆಗಳ ಕುರಿತು ಪರಿಶೀಲಿಲಿಸಿದರು. ತ್ಯಾಜ್ಯವನ್ನು ದೇವಸ್ಥಾನದ ಹೊರವಲಯಲ್ಲಿ ಸಂಗ್ರಹಿಸಲಾಗುತ್ತಿದ್ದು ನಂತರ ಅದನ್ನು ಪುರಸಭೆ ವ್ಯಾಪ್ತಿಗೆ ಕಳುಹಿಸಲು ಕ್ರಮ ಕೈಗೊಂಡಿರುವುದರ ಮಾಹಿತಿ ಪಡೆದರು. ಪ್ರಗತಿಯಲ್ಲಿರುವ ₹ 138 ಕೋಟಿ ಮೊತ್ತದ ಕಾಮಗಾರಿಗಳ ಪ್ರಗತಿ ಪರಿಶೀಲಿಸಿದರು.
ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ರವಿ ಕೋಟಾರಗಸ್ತಿ, ತಹಶೀಲ್ದಾರ್ ಪ್ರಶಾಂತ ಪಾಟೀಲ, ಯರಗಟ್ಟಿ ತಹಶೀಲ್ದಾರ್ ಎಂ.ಎನ್. ಮಠದ, ಪಿಡಬ್ಲ್ಯುಡಿ ಅಧಿಕಾರಿ ಎಚ್.ಎ. ಕದ್ರಾಪೂರ ಇದ್ದರು.