ಧಾರವಾಡ: ‘ಶಾಲಾ ಶುಲ್ಕ ಭರಿಸಿಕೊಳ್ಳುವುದರ ಜತೆಗೆ ಸ್ಯಾನಿಟೈಸೇಷನ್ ನೆಪದಲ್ಲಿ ಕೊರೊನಾ ಶುಲ್ಕವನ್ನು ಪಾಲಕರಿಂದ ವಸೂಲು ಮಾಡಿದ್ದು ಕಂಡುಬಂದರೆ, ಅಂಥ ಶಾಲಾ ಆಡಳಿತ ಮಂಡಳಿಗಳ ವಿರುದ್ಧ ಕೋವಿಡ್ ಕಾನೂನಿನಡಿ ಶಿಸ್ತುಕ್ರಮ ಜರುಗಿಸಲಾಗುವುದು’ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್‌ಕುಮಾರ್ ಹೇಳಿದರು.
‘ವಿದ್ಯಾಗಮ’ ಅನುಷ್ಠಾನ ಕುರಿತು ಜಿಲ್ಲೆಯ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಶಾಲಾ ಶುಲ್ಕ ವಿಚಾರದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮ್ಮ ವ್ಯಾಪ್ತಿಯ ಶಾಲೆಗಳ ಪರಿಶೀಲನೆ ನಡೆಸಲಿದ್ದಾರೆ. ಜತೆಗೆ ಪಡೆದ ಶುಲ್ಕ ಅಲ್ಲಿನ ಶಿಕ್ಷಕರಿಗೆ ತಲುಪಿದೆಯೇ ಎಂಬುದನ್ನೂ ಖಚಿತಪಡಿಸಿಕೊಂಡು ಇಲಾಖೆಗೆ ವರದಿ ಸಲ್ಲಿಸಲಿದ್ದಾರೆ’ ಎಂದರು.
ವಿದ್ಯಾಗಮ ಕಾರ್ಯಕ್ರಮದ ಮೂಲಕ ಸುರಕ್ಷಿತ ವಲಯದಲ್ಲಿ ನಿರಂತರ ಕಲಿಕೆ ಮುಂದುವರಿಯುವಂತೆ ಇಲಾಖೆ ಕ್ರಮ ವಹಿಸಿದೆ. ಇದರಿಂದ ಬಾಲ್ಯವಿವಾಹ ಹಾಗೂ ಬಾಲಕಾರ್ಮಿಕ ಪದ್ಧತಿ ನುಸುಳಲು ಅವಕಾಶವಿರದು’ ಎಂದರು.
‘ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದ ಅನುಭವ ಕರ್ನಾಟಕದ್ದು. ಹೀಗಾಗಿ ಈ ಬಾರಿ ಪಾಠ ಮಾಡಲು ಸಿಗುವ ಅವಧಿಯನ್ನು ಲೆಕ್ಕ ಹಾಕಿ ಪಠ್ಯ ಕಡಿತ ಕುರಿತು ತೀರ್ಮಾನ ತೆಗೆದುಕೊಳ್ಳಲಾಗುವುದು. ಈ ನಡುವೆ ಅನುದಾನ ರಹಿತ ಶಾಲೆಗಳ ಸಿಬ್ಬಂದಿಗೆ ನೆರವಾಗಬೇಕು ಎಂಬ ಉದ್ದೇಶ ಇಲಾಖೆಯದ್ದು. ಈ ಕುರಿತು ಮುಖ್ಯಮಂತ್ರಿ ಅವರೊಂದಿಗೂ ಚರ್ಚಿಸಲಾಗಿದೆ. ಜತೆಗೆ ಆರ್ಥಿಕ ಇಲಾಖೆಯೊಂದಿಗೂ ಸಮಾಲೋಚನೆ ನಡೆಸಲಾಗಿದೆ. ಇಷ್ಟು ವರ್ಷಗಳ ಕಾಲ ಶಿಕ್ಷಕರನ್ನು ದುಡಿಸಿಕೊಂಡಿರುವ ಶಿಕ್ಷಣ ಸಂಸ್ಥೆಗಳೂ ತಮ್ಮ ಜವಾಬ್ದಾರಿಯನ್ನು ತೋರಬೇಕಾಗಿದೆ’ ಎಂದು ಸುರೇಶ್‌ಕುಮಾರ್ ಹೇಳಿದರು.