ನವದೆಹಲಿ: ಕೋವಿಡ್-19ನಿಂದಾಗಿ ಮನೆಯಿಂದ ಹೊರಬರದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಜನರು ತಮ್ಮ ಕೆಲಸ ಕಾರ್ಯಗಳನ್ನು ಮನೆಯಿಂದಲೇ ಮಾಡುತ್ತಲಿದ್ದರೆ, ಇನ್ನು ಕೆಲವರು ಎಲ್ಲಾ ಸುರಕ್ಷತಾ ಕ್ರಮದೊಂದಿಗೆ ಕಚೇರಿ ಹಾಗೂ ಇನ್ನಿತರ ಕೆಲಸ ಕಾರ್ಯಗಳಿಗೆ ತೆರಳುತ್ತಿರುವರು. ಆದರೆ ಕೊರೋನಾದಿಂದ ದೇಶದ ಶೈಕ್ಷಣಿಕ ವ್ಯವಸ್ಥೆಗೆ ದೊಡ್ಡ ಮಟ್ಟದ ಪೆಟ್ಟು ಬಿದ್ದಿದೆ.
ಜನರು ತಮ್ಮ ಮಕ್ಕಳನ್ನು ಶಾಲೆಗಳಿಗೆ ಕಳುಹಿಸಲು ಹೆದರುತ್ತಿರುವುದು ಒಂದೆಡೆಯಾದರೆ, ಸರ್ಕಾರ ಕೂಡ ಶಾಲೆ, ಕಾಲೇಜುಗಳನ್ನು ತೆರೆಯಲು ಇದುವರೆಗೆ ಅನುಮತಿ ನೀಡಿಲ್ಲ.
ಹೀಗಾಗಿ ಕೆಲವೊಂದು ರಾಜ್ಯಗಳಲ್ಲಿ ಆನ್ ಲೈನ್ ಶಿಕ್ಷಣವು ನಡೆಯುತ್ತಲಿದೆ. ಅದರಲ್ಲಿ ನಮ್ಮ ರಾಜ್ಯವೂ ಒಂದು. ಆದರೆ ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಸಂಸ್ಥೆ(ಎನ್ ಸಿಇಆರ್ ಟಿ) ನಡೆಸಿರುವಂತಹ ಸಮೀಕ್ಷೆಯು ಶೇ.27ರಷ್ಟು ವಿದ್ಯಾರ್ಥಿಗಳಲ್ಲಿ ಆನ್ ಲೈನ್ ಶಿಕ್ಷಣಕ್ಕಾಗಿ ಯಾವುದೇ ಲ್ಯಾಪ್ ಟಾಪ್ ಅಥವಾ ಮೊಬೈಲ್ ವ್ಯವಸ್ಥೆಯು ಇಲ್ಲವೆಂದು ಹೇಳಿದೆ.
ಈ ಸಮೀಕ್ಷೆಯಲ್ಲಿ ಎನ್ ಸಿಇಆರ್ ಟಿಯು ಸುಮಾರು 34 ಸಾವಿರ ಜನರನ್ನು ಒಳಪಡಿಸಿದ್ದು, ಇದರಲ್ಲಿ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಹಾಗೂ ಕೇಂದ್ರೀಯ ವಿದ್ಯಾಲಯ, ನವೋದಯ ವಿದ್ಯಾಲಯ ಮತ್ತು ಸಿಬಿಎಸ್ ಇ ಶಾಲೆಗಳ ಪ್ರಾಂಶುಪಾಲರು ಸೇರಿದ್ದಾರೆ.
ಶೈಕ್ಷಣಿಕ ವ್ಯವಸ್ಥೆಗೆ ಆಧುನಿಕ ಸೌರ್ಕಯಗಳನ್ನು ಸರಿಯಾಗಿ ಬಳಸಿಕೊಳ್ಳಲು ಜ್ಞಾನವಿಲ್ಲದೆ ಇರುವುದು ಮತ್ತು ಆನ್ ಲೈನ್ ನಲ್ಲಿ ಶಿಕ್ಷಣ ನೀಡಲು ಶಿಕ್ಷಕರು ಹೊಂದಿಕೊಳ್ಳದೆ ಇರುವುದು ಆನ್ ಲೈನ್ ಶಿಕ್ಷಣಕ್ಕೆ ಅಡ್ಡಿಯಾಗಿದೆ.
ಶಿಕ್ಷಣ ಸಚಿವಾಲಯವು ನಡೆಸಿರುವಂತಹ ಸಮೀಕ್ಷೆಯಲ್ಲಿ ಶೇ.33ರಷ್ಟು ಮಂದಿ ಆನ್ ಲೈನ್ ಶಿಕ್ಷಣವು ತುಂಬಾ ಕಠಿಣ ಹಾಗೂ ಹೊರೆಯಾಗುತ್ತಿದೆ ಎಂದು ಹೇಳಿರುವರು. ಇದರಲ್ಲಿ ಶೇ.27ರಷ್ಟು ವಿದ್ಯಾರ್ಥಿಗಳಲ್ಲಿ ಲ್ಯಾಪ್ ಟಾಪ್ ಅಥವಾ ಸ್ಮಾರ್ಟ್ ಫೋನ್ ವ್ಯವಸ್ಥೆ ಇಲ್ಲ. ಇದರ ಹೊರತಾಗಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಮೊಬೈಲ್ ನ್ನು ಶಿಕ್ಷಣಕ್ಕಾಗಿ ಬಳಸಿಕೊಂಡಿರುವರು ಎಂದು ಎನ್ ಸಿಇಆರ್ ಟಿ ಸಮೀಕ್ಷೆ ಹೇಳಿದೆ.
ಆನ್‌ಲೈನ್ ತರಗತಿಯ ತೊಂದರೆಗಳು:
• ಪಾಠ ಸರಿಯಾಗಿ ಕೇಳಿಸದೇ ಇರಬಹುದು
• ತರಗತಿಗೆ ನಾನಾ ವಿಧದ ತೊಂದರೆ ಎದುರಾಗಬಹುದು
• ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ನಡುವೆ ಸಂವಹನ ಕಷ್ಟ
• ವಿದ್ಯಾರ್ಥಿಗಳಿಗೆ ಸಮಸ್ಯೆ ಎದುರಾದರೆ ಅದನ್ನ ನಿವಾರಿಸುವುದು ಸುಲಭವಲ್ಲ.
• ಮಕ್ಕಳ ಲಕ್ಷ್ಯ ಬೇರೆಡೆ ಹೋಗದಂತೆ ನೋಡಿಕೊಳ್ಳುವುದು ಶಿಕ್ಷಕರಿಗೆ ತೀರಾ ಕಷ್ಟ ಆಗಬಹುದು
• ಒಂದೇ ಮನೆಯಲ್ಲಿ ಇಬ್ಬರು ಶಾಲೆಗೆ/ ಕಾಲೇಜಿಗೆ ಹೋಗುವವರಿದ್ದರೆ ಒಂದು ಮೊಬೈಲ್‌ನಿಂದ ಇಬ್ಬರು ಏಕಕಾಲದಲ್ಲಿ ಪಾಠ ಕೇಳುವುದು ಅಸಾಧ್ಯ
• ಮಕ್ಕಳು ಆನ್ ಲೈನ್ ಕ್ಲಾಸ್ ನೆಪವೊಡ್ಡಿ ಪಾಲಕರಿಗೆ ಮೊಬೈಲ್, ಲ್ಯಾಪ್‌ಟಾಪ್ ಬೇಕು ಅಂತಾ ಹಠ ಹಿಡಿಯಬಹುದು.
• ಶಿಕ್ಷಕರ ಮೇಲಿನ ಗೌರವ ಕಡಿಮೆ ಆಗಬಹುದು
• ಆನ್ ಲೈನ್ ತರಗತಿ ಓದಿನ ಗುಣಮಟ್ಟವನ್ನು ತಗ್ಗಿಸಬಹುದು
• ವ್ಯವಸ್ಥೆ ಸರಿ ಇಲ್ಲದೆ ಇದ್ದಾಗ ಆನ್‌ಲೈನ್ ತರಗತಿ ನಡೆಸುವುದು ಹೇಗೆ?
ಇಂತಹ ಪ್ರಶ್ನೆಗಳು ಪಾಲಕ ಹಾಗೂ ಪೋಷಕರನ್ನು ಕಾಡುತ್ತಿದೆ.