ಭಾರತೀಯ ಪರಂಪರೆಯಲ್ಲಿ ಧಾರ್ಮಿಕ ಮಠ ಮತ್ತು ಪೀಠಗಳು ಸಾಮಾಜಿಕ ಜಾಗೃತಿ ಉಂಟುಮಾಡುತ್ತಿದ್ದು ಈ ಜನಜಾಗೃತಿಗಾಗಿಯೇ *ಮಹರ್ಷಿ ವಾಲ್ಮೀಕಿ ಜಾತ್ರೆ* ಹಮ್ಮಿಕೊಳ್ಳಲಾಗಿದೆ ಎಂದು ಜಲಸಂಪನ್ಮೂಲ ಸಚಿವ ಮತ್ತು ವಾಲ್ಮೀಕಿ ಜಾತ್ರಾ ಸಮಿತಿಯ ಅಧ್ಯಕ್ಷ *ಶ್ರೀ ರಮೇಶ್ ಜಾರಕಿಹೊಳಿ* ತಿಳಿಸಿದ್ದಾರೆ.
ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕು ರಾಜನಹಳ್ಳಿ ಗ್ರಾಮದಲ್ಲಿರುವ ವಾಲ್ಮೀಕಿ ಗುರುಪೀಠದಲ್ಲಿ *ಫೆಬ್ರವರಿ 8 ಮತ್ತು 9* ರಂದು *ಮಹರ್ಷಿ ವಾಲ್ಮೀಕಿ ಜಾತ್ರೆ* ಹಮ್ಮಿಕೊಂಡಿದ್ದು, ಶ್ರೀ ಮಠದ 23ನೇ ವಾರ್ಷಿಕೋತ್ಸವ, ಲಿಂಗೈಕ್ಯ ಜಗದ್ಗುರು ಶ್ರೀ ಪುಣ್ಯಾನಂದಪುರಿ ಸ್ವಾಮಿಗಳ 14ನೇ ಪುಣ್ಯಸ್ಮರಣೆ ಮತ್ತು ಜಗದ್ಗುರು ಶ್ರೀ ವಾಲ್ಮೀಕಿ ಪ್ರಸನ್ನಾನಂದ ಮಹಾಸ್ವಾಮಿಗಳ 13ನೇ ಪಟ್ಟಾಧಿಕಾರ ಮಹೋತ್ಸವ ಕಾರ್ಯಕ್ರಮ ನಡೆಯಲಿದೆ ಎಂದು ಸಚಿವ *ರಮೇಶ್ ಜಾರಕಿಹೊಳಿ* ತಿಳಿಸಿದರು.
ನಮ್ಮ ಸಮಾಜದ ಸಾಮಾಜಿಕ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಎತ್ತಿಹಿಡಿಯಲು *ವಾಲ್ಮೀಕಿ ಜಾತ್ರೆ* ಆಯೋಜನೆ ಮಾಡಲಾಗಿದ್ದು, ಎರಡು ದಿನಗಳ ಕಾಲ ವೈಚಾರಿಕ ಚಿಂತನೆಯ ತಳಹದಿಯಲ್ಲಿ ಚರ್ಚೆಗಳು ನಡೆಯಲಿವೆ ಮತ್ತು ಬುಡಕಟ್ಟು ಜನಾಂಗ ಎದುರಿಸುತ್ತಿರುವ ಸವಾಲುಗಳ ಕುರಿತು ವಿಚಾರ ಗೋಷ್ಠಿ ನಡೆಯಲಿದೆ. ದಿ. 9ರಂದು ನಡೆಯುವ ಜನಜಾಗೃತಿ ಸಮಾವೇಶವನ್ನು ರಾಜ್ಯದ ಮುಖ್ಯಮಂತ್ರಿಗಳಾದ *ಶ್ರೀ ಬಿ ಎಸ್ ಯಡಿಯೂರಪ್ಪ* ಅವರು ಉದ್ಘಾಟಿಸಲಿದ್ದಾರೆ. ಅಭಿನಯ ಚಕ್ರವರ್ತಿ *ಕಿಚ್ಚ ಸುದೀಪ್* ಅವರಿಗೆ ವಾಲ್ಮೀಕಿ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಸಮಾರಂಭದಲ್ಲಿ ರಾಜ್ಯ ಸರಕಾರದ ಉಪ ಮುಖ್ಯಮಂತ್ರಿಗಳು, ಸಚಿವರು, ಶಾಸಕರು, ಸಂಸದರೂ ಸೇರಿದಂತೆ ಜನಪ್ರತಿನಿಧಿಗಳು ಮತ್ತು ವಿವಿಧ ಮಠಗಳ ಪೂಜ್ಯ ಸ್ವಾಮೀಜಿಗಳು ಭಾಗವಹಿಸಲಿದ್ದಾರೆ ಮತ್ತು ಮಹರ್ಷಿ ವಾಲ್ಮೀಕಿ ಗುರುಪೀಠದ ಪರಮಪೂಜ್ಯ ಜಗದ್ಗುರು *ಶ್ರೀ ವಾಲ್ಮೀಕಿ ಪ್ರಸನ್ನಾನಂದ ಮಹಾ ಸ್ವಾಮೀಜಿ* ಯವರು ಕಾರ್ಯಕ್ರಮಗಳ ದಿವ್ಯ ಸಾನಿಧ್ಯವನ್ನು ವಹಿಸಲಿದ್ದಾರೆ ಎಂದು ಸಚಿವ *ರಮೇಶ್ ಜಾರಕಿಹೊಳಿ* ತಿಳಿಸಿದ್ದಾರೆ.