ಕರ್ನಾಟಕದ ಗಡಿ ಜಿಲ್ಲೆಗಳು ಮತ್ತು ತಾಲ್ಲೂಕುಗಳ ಸರ್ವಾಂಗೀಣ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದ್ದು ರಾಜ್ಯದ ಬೊಕ್ಕಸಕ್ಕೆ ತುಂಬಾ ಒತ್ತಡವಾಗದಂತೆ ಅನುದಾನ ನೀಡುವಂತೆ ಮುಖ್ಯಮಂತ್ರಿಗಳ ಮನ ಒಲಿಸುವುದಾಗಿ ಜಲಸಂಪನ್ಮೂಲ ಸಚಿವರಾದ *ಶ್ರೀ ರಮೇಶ್ ಜಾರಕಿಹೊಳಿ* ಹೇಳಿದರು.
ಕರ್ನಾಟಕ ರಾಜ್ಯ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ನಿವೃತ್ತ ಐಎಎಸ್ ಅಧಿಕಾರಿ *ಡಾ. ಸಿ ಸೋಮಶೇಖರ್* ಅವರೊಂದಿಗೆ ನಡೆದ ಮಾತುಕತೆಯ ವೇಳೆ ಮಾತನಾಡಿದ ಸಚಿವ *ರಮೇಶ್ ಜಾರಕಿಹೊಳಿ* ಕರ್ನಾಟಕ ರಾಜ್ಯದ ಒಟ್ಟು 19 ಜಿಲ್ಲೆಗಳು ನೆರೆ ರಾಜ್ಯಗಳೊಂದಿಗೆ ಗಡಿ ಹಂಚಿಕೊಂಡಿದ್ದು ಆ ಜಿಲ್ಲೆಗಳ 63 ತಾಲ್ಲೂಕುಗಳನ್ನು ಅಭಿವೃದ್ಧಿ ಪಡಿಸುವ ಇಚ್ಚೆ ಸರ್ಕಾರಕ್ಕಿದೆ. ಕಳೆದ ವರ್ಷದ ಬಜೆಟ್ ನಲ್ಲಿ ಘೋಷಿಸಿದಂತೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸಾಧ್ಯವಾಗಿಲ್ಲ. ಮಹಾಮಾರಿ ಕೋವಿಡ್ ನ ಸಾಂಕ್ರಾಮಿಕ ಹರಡುವಿಕೆ ತಡೆಯುವ ಕೆಲಸಗಳಿಗಾಗಿ ರಾಜ್ಯದ ಬೊಕ್ಕಸಕ್ಕೆ ತುಂಬಾ ಹೊರೆಯಾದ ಕಾರಣ ನೂರಾರು ಯೋಜನೆಗಳನ್ನು ಮುಂದೂಡಿದ್ದೇವೆ. ಮುಂಬರುವ ಆಯವ್ಯಯದಲ್ಲಿ ಗಡಿಭಾಗಗಳ ಅಭಿವೃದ್ಧಿಗಾಗಿಯೇ ವಿಶೇಷ ಅನುದಾನ ಒದಗಿಸಲು ಮುಖ್ಯಮಂತ್ರಿಗಳೊಂದಿಗೆ ಶೀಘ್ರವೇ ಚರ್ಚಿಸುವುದಾಗಿ ಹೇಳಿದರು.
ತಾವು ಸಹಾ ಗಡಿ ಜಿಲ್ಲೆಯನ್ನು ಪ್ರತಿನಿಧಿಸುತ್ತಿದ್ದು, ರಾಜ್ಯದ ಗಡಿಭಾಗದ ಜನರ ಕಷ್ಟ ಸುಖಗಳ ಅರಿವಿದೆ. ಅದರಂತೆ ಕ್ರಿಯಾಯೋಜನೆ ರೂಪಿಸಿ, ಗಡಿ ಗ್ರಾಮಗಳನ್ನು ಅಭಿವೃದ್ಧಿ ಪಡಿಸಲಾಗುವುದು. ಗಡಿಪ್ರದೇಶದ ಸರ್ಕಾರಿ ಕನ್ನಡ ಶಾಲೆಗಳನ್ನು ಈಗಾಗಲೇ ದತ್ತುಪಡೆದುಕೊಳ್ಳುವ ವ್ಯವಸ್ಥೆ ಮಾಡಿದ್ದೇವೆ. ಒಟ್ಟಾರೆ ಗಡಿ ಪ್ರದೇಶದ ತಾಲ್ಲೂಕುಗಳನ್ನು ಸರ್ವಾಂಗೀಣ ಅಭಿವೃದ್ಧಿ ಪಡಿಸಲಾಗುವುದು ಎಂದು ಸಚಿವ *ರಮೇಶ್ ಜಾರಕಿಹೊಳಿ* ಹೇಳಿದರು.
2021-22ನೇ ಸಾಲಿನಲ್ಲಿ ಗಡಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಹೆಚ್ಚಿನ ಅನುದಾನ ಕೊಡಿಸುವಂತೆ ಪ್ರಾಧಿಕಾರದ ಅಧ್ಯಕ್ಷ ಡಾ.ಸೋಮಶೇಖರ್, ಸಚಿವ *ರಮೇಶ್ ಜಾರಕಿಹೊಳಿ* ಅವರಿಗೆ ಮನವಿ ಸಲ್ಲಿಸಿದರು.
CKNEWSKANNADA / BRASTACHARDARSHAN CK NEWS KANNADA