ಬೆಳಗಾವಿ: ಲೋಕಸಭಾ ಉಪ ಚುನಾವಣಾ ಪ್ರಚಾರದ ಅಖಾಡಕ್ಕೆ ಧುಮುಕಿರುವ ಜಲಸಂಪನ್ಮೂಲ ಮತ್ತು ಬೆಳಗಾವಿ ಜಿಲ್ಲೆಯ ಉಸ್ತುವಾರಿ ಸಚಿವರಾದ *ಶ್ರೀ ರಮೇಶ್ ಜಾರಕಿಹೊಳಿ* ಅವರು, ಜಿಲ್ಲೆಯ ಮರಾಠಾ ಸಮುದಾಯದ ಪ್ರಮುಖ ಮುಖಂಡರ ಸಭೆ ನಡೆಸಿದರು.
ಗೋಕಾಕ್ ನಗರದಲ್ಲಿರುವ ಕಚೇರಿಯಲ್ಲಿ ನಡೆದ ಸಭೆಯಲ್ಲಿ, ವಾಡಿಕೆಗಿಂತಾ ಹೆಚ್ಚಿನ ಮತದಾನ ಮಾಡಿ ಬಿಜೆಪಿ ಅಭ್ಯರ್ಥಿಯನ್ನು ಲೋಕಸಭೆಗೆ ಆಯ್ಕೆಮಾಡಬೇಕು. ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವವನ್ನು ಮತ್ತಷ್ಟು ಸುಭದ್ರ ಪಡಿಸಬೇಕು ಎಂದು ಸಚಿವರು ಕರೆ ನೀಡಿದರು.
ಬೆಳಗಾವಿ ಜಿಲ್ಲೆಯಾದ್ಯಂತ ಬಿಜೆಪಿಯು ಸಾಮರ್ಥ್ಯ ಹೊಂದಿದ್ದು, ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರವನ್ನು ಪ್ರತಿಷ್ಠೆಯನ್ನಾಗಿ ತೆಗೆದುಕೊಂಡು ಕಾರ್ಯಕರ್ತರು ಕೆಲಸ ಮಾಡಬೇಕು. ತಮ್ಮ ಮುಂದಿನ ಗುರಿ ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರವಾಗಿದ್ದು ಅತಿ ಹೆಚ್ಚಿನ ಜನಪರ ಕೆಲಸ ಮಾಡಿ, ಮುಂದಿನ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಲೇಬೇಕು. ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲೂ ಬಿಜೆಪಿ ಸಾಮರ್ಥ್ಯ ಹೆಚ್ಚಿಸಬೇಕು ಎಂದು ಸಚಿವ *ರಮೇಶ್ ಜಾರಕಿಹೊಳಿ* ಕರೆ ನೀಡಿದರು.
ಬಿಜೆಪಿ ಬೆಳಗಾವಿ ಗ್ರಾಮೀಣ ಅಧ್ಯಕ್ಷ ಧನಂಜಯ ಜಾಧವ್, ಬೆಳಗಾವಿ ಮಹಾನಗರ ಪಾಲಿಕೆಯ ಮಾಜಿ ಮೇಯರ್ ಶಿವಾಜಿ ಸುಂಥ್ಕರ್, ಪ್ರಮುಖ ನಾಯಕರಾದ ಮೋಹನ್ ಮೋರೆ ಸೇರಿದಂತೆ ಬೆಳಗಾವಿ ಜಿಲ್ಲೆಯ ಪ್ರಮುಖ ಮರಾಠಾ ಸಮುದಾಯದ ಮುಖಂಡರು, ಬಿಜೆಪಿ ಕಾರ್ಯಕರ್ತರು ಸಭೆಯಲ್ಲಿ ಭಾಗವಹಿಸಿದ್ದರು.