ಹೊಸದಿಲ್ಲಿ: ಅಣೆಕಟ್ಟೆಗಳ ಪುನಶ್ಚೇತನ ಹಾಗೂ ಸುಧಾರಣಾ ಯೋಜನೆಗಳ ಅನುದಾನದಲ್ಲಿ ಕರ್ನಾಟಕ ಹಲವು ಅಣೆಕಟ್ಟೆಗಳ ಸಬಲೀಕರಣಕ್ಕೆ ಕೇಂದ್ರ ಸರ್ಕಾರ 750 ಕೋಟಿ ರೂ.ಅನುದಾನ ನೀಡಲು ಒಪ್ಪಿಗೆ ನೀಡಿದೆ.
ರಾಜ್ಯ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರ ಸತತ ಪ್ರಯತ್ನದ ಹಿನ್ನೆಲೆಯಲ್ಲಿ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ಈ ಅನುದಾನ ಬಿಡುಗಡೆ ಮಾಡಲು ಒಪ್ಪಿಕೊಂಡಿದ್ದಾರೆ.
ಕೇಂದ್ರ ಜಲಶಕ್ತಿ ಆಯೋಗವು ದೇಶದ ಪ್ರಮುಖ ಅಣೆಕಟ್ಟೆಗಳ ಸಬಲೀಕರಣಕ್ಕಾಗಿ ವಿಶ್ವಬ್ಯಾಂಕ್ ನೆರವಿನ ಡ್ರಿಪ್ ಯೋಜನೆಯಡಿ ಗಾಯತ್ರಿ ಡ್ಯಾಂ, ತುಂಗಭದ್ರಾ ಡ್ಯಾಂ, ನಾರಾಯಣಪುರ ಡ್ಯಾಂ, ಮತ್ತು ಕೆಆರ್ ಎಸ್ ಡ್ಯಾಂಗಳ ಸಬಲೀಕರಣ ಸೇರಿದಂತೆ 52 ಅಣೆಕಟ್ಟೆಗಳ ಪುನಶ್ಚೇತನಕ್ಕಾಗಿ ಜಲಸಂಪನ್ಮೂಲ ಇಲಾಖೆ 1500 ಕೋಟಿಗಳ ಅನುದಾನ ಬೇಡಿಕೆ ಇಟ್ಟಿತ್ತು.
ಇಂದು ದೆಹಲಿಯಲ್ಲಿ ಜಲಶಕ್ತಿ ಭವನದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಸಚಿವ ರಮೇಶ್ ಜಾರಕಿಹೊಳಿ ಅವರು ಕೇಂದ್ರ ಸಚಿವರ ಗಮನ ಸೆಳೆದು, 750 ಕೋಟಿ ರೂ.ಗಳ ಅನುದಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಬಳಿಕ ಮಾತನಾಡಿದ ಸಚಿವರ ರಮೇಶ್ ಜಾರಕಿಹೊಳಿ, ರಾಜ್ಯದ ನೀರಾವರಿ ಯೋಜನೆಗಳನ್ನು ಕಾಲಮಿತಿಯಲ್ಲಿ ಅನುಷ್ಠಾನಗೊಳಿಸಲು ನಾವು ಬದ್ಧರಾಗಿದ್ದೇವೆ. ವಿಶ್ವಬ್ಯಾಂಕ್ ನೆರವಿನ ಯೋಜನೆಗಳ ಅನುದಾನಕ್ಕೆ ನಾವು ಮಾಡಿದ ಮನವಿಗೆ ಕೇಂದ್ರ ಸಚಿವರು ಸಮ್ಮತಿಸಿದ್ದಾರೆ. ಕಾರ್ಯ ಯೋಜನೆಗಳನ್ನು ಅಂತಿಮಗೊಳಿಸಿ ಅನುಮೋದನೆ ಪಡೆಯುತ್ತೇವೆ ಎಂದರು.