ನವದೆಹಲಿ: ದಿಡೀರ್ ಬೆಳವಣಿಗೆಯಲ್ಲಿ ದೆಹಲಿಗೆ ತೆರಳಿರುವ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಲಿದ್ದಾರೆ.
ನಡ್ಡಾ ಸೂಚನೆ ಮೇರೆಗೆ ರಮೇಶ ಜಾರಕಿಹೊಳಿ ಕಳೆದ ರಾತ್ರಿಯೇ ದೆಹಲಿ ತಲುಪಿದ್ದು, ರಾಜ್ಯ ರಾಜಕೀಯ ಬೆಳವಣಿಗೆ ಹಾಗೂ ಮಹಾರಾಷ್ಟ್ರದಲ್ಲಿ ಆಪರೇಷನ್ ಕಮಲ ಬಗ್ಗೆ ಮಾತುಕತೆ ನಡೆಸುವ ಸಾಧ್ಯತೆ ಇದೆ.
ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಬಿಜೆಪಿಯಲ್ಲಿ ಭರ್ಜರಿ ಕಸರತ್ತು ನಡೆದಿರುವ ಬೆನ್ನಲ್ಲೇ ಸಿಎಮ ಯಡಿಯೂರಪ್ಪ ಅವರನ್ನು ದೂರವಿಟ್ಟು ರಮೇಶ್ ಜಾರಕಿಹೊಳಿ ಅವರನ್ನು ಜೆ.ಪಿ ನಡ್ಡಾ ಕರೆಸಿಕೊಂಡಿರುವುದು ಬಿಜೆಪಿಯಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ರಾಜ್ಯ ಬಿಜೆಪಿಯಲ್ಲಿ ರಮೇಶ್ ಜಾರಕಿಹೊಳಿ ಪವರ್ ಲೀಡರ್ ರೀತಿ ಬದಲಾಗುತ್ತಿರುವುದರ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಮಹಾರಾಷ್ಟ್ರದಲ್ಲಿ ಆಪರೇಷನ್ ಕಮಲ ಪ್ಲಾನ್..!
ರಾಜ್ಯ ಸಚಿವ ಸಂಪುಟ ವಿಸ್ತರಣೆ ವಿಚಾರಕ್ಕಿಂತ ಮಹಾರಾಷ್ಟ್ರದ ಶಿವಸೇನೆ ನೇತೃತ್ವದ ಅಘಾಡಿ ಸರ್ಕಾರ ಪತನಗೊಳಿಸುವುದು ಬಿಜೆಪಿಯ ಹಿಡನ್ ಅಜೆಂಡಾಗಳಲ್ಲಿ ಒಂದು. ಶಿವಸೇನೆ ಸರ್ಕಾರವನ್ನು ಪತನಗೊಳಿಸಲು ಕರ್ನಾಟಕದ ಮಾದರಿಯಲ್ಲೇ ಮಹಾರಾಷ್ಟ್ರದಲ್ಲೂ ವರ್ಕ್‍ಔಟ್ ಮಾಡುವುದು ಬಿಜೆಪಿ ಹೈಕಮಾಂಡ್ ಲೆಕ್ಕಾಚಾರವಾಗಿದೆ.
ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹಾಗೂ ರಮೇಶ್ ಜಾರಕಿಹೊಳಿ ತುಂಬಾ ಆಪ್ತರು. ದೇವೇಂದ್ರ ಫಡ್ನವೀಸ್ ಶೀಘ್ರದಲ್ಲೇ ತಮ್ಮ ಸರ್ಕಾರ ಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ರಾಜಕಾರಣಿಗಳೊಂದಿಗೆ ನಿಕಟ ಸಂಪರ್ಕ ಹೊಂದಿರುವ ರಮೇಶ್ ಜಾರಕಿಹೊಳಿ ಅವರನ್ನು ಕರೆಸಿಕೊಂಡಿರಬಹುದಾ ಎಂಬ ಅನುಮಾನವೂ ಇದೆ.
ಹೀಗಾಗಿ ಮಹಾ ಆಪರೇಷನ್ ಕಮಲಕ್ಕೆ ರಮೇಶ್ ಜಾರಕಿಹೊಳಿ ಜೊತೆ ಮೆಗಾಪ್ಲಾನ್ ಮಾಡಲು ನಡ್ಡಾ ಕರೆಸಿಕೊಂಡಿರುವ ಸಾಧ್ಯತೆಗಳ ಬಗ್ಗೆಯೂ ರಾಜಕಿಯ ವಲಯದಲ್ಲಿ ಚರ್ಚೆಯಾಗುತ್ತಿದೆ.
ರಮೇಶ್ ಜಾರಕಿಹೊಳಿ ಅವರ ಆಪ್ತ ವಲಯದ ಪ್ರಕಾರ, ಮಹಾರಾಷ್ಟ್ರದಲ್ಲಿ ಆಪರೇಷನ್ ಕಮಲದ ತಯಾರಿ ಶುರುವಾಗಿದೆ. ಅದರಲ್ಲಿ ರಮೇಶ್ ಜಾರಕಿಹೊಳಿ ಅವರನ್ನು ಬಳಸಿಕೊಳ್ಳಲಾಗುತ್ತಿದೆ. ಆದರೆ ಈ ಬಗ್ಗೆ ಮಹಾರಾಷ್ಟ್ರ ಬಿಜೆಪಿ ಉಸ್ತುವಾರಿ ಆಗಿರುವ ರಾಜ್ಯದವರೇ ಆದ ಸಿ.ಟಿ. ರವಿ ಯಾವುದೇ ಸುಳಿವು ಬಿಟ್ಟುಕೊಟ್ಟಿಲ್ಲ.
ಜೆ.ಪಿ. ನಡ್ಡಾ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದ ಬಳಿಕ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರನ್ನು ಕೂಡ ರಮೇಶ್ ಜಾರಕಿಹೊಳಿ ಭೇಟಿ ಮಾಡುವ ಸಾಧ್ಯತೆ ಇದೆ.