ಬೆಂಗಳೂರು: -ರಾಜ್ಯ ಸಚಿವ ಸಂಪುಟ ವಿಸ್ತರಣೆ ಇಂದೋ ಅಥವಾ ನಾಳೆಯೋ ಎಂಬ ತೂಗುಯ್ಯಾಲೆಯಲ್ಲಿರುವಾಗಲೇ ಬಿಜೆಪಿಯ ಪವರ್ ಸೆಂಟರ್ ಎಂದೇ ಗುರುತಿಸಿಕೊಂಡಿರುವ ಸಚಿವ ರಮೇಶ್ ಜಾರಕಿಹೊಳಿ ದೆಹಲಿಗೆ ಧಿಡೀರ್ ಭೇಟಿ ನೀಡಿರುವುದು ಭಾರೀ ಕುತೂಹಲಕ್ಕೆ ಎಡೆ ಮಾಡಿದೆ.
ವರಿಷ್ಠರ ಬುಲಾವ್ ಮೇರೆಗೆ ಸಚಿವ ರಮೇಶ್ ಜಾರಕಿಹೊಳಿ ಇಂದು ದೆಹಲಿಗೆ ತೆರಳಿದ್ದು, ಈಗ ಬಿಜೆಪಿಯಲ್ಲಿ ನಡೆಯುತ್ತಿರುವ ವದಂತಿಗಳಿಗೆ ರೆಕ್ಕೆಪುಕ್ಕ ಬಂದಂತಾಗಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಸೂಚನೆ ಮೇರೆಗೆ ಜಾರಕಿಹೊಳಿ ದೆಹಲಿಗೆ ತೆರಳಿದ್ದು, ಸಂಪುಟವಿಸ್ತರಣೆ ಕುರಿತಂತೆ ಮಾತುಕತೆ ನಡೆಸಲಿದ್ದಾರೆ.
ನಿನ್ನೆಯಷ್ಟೇ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಎರಡು ದಿನಗಳ ಹಿಂದೆ ಪಕ್ಷದ ರಾಷ್ಟ್ರೀಯ ಸಂಘಟನೆ ಕಾರ್ಯದರ್ಶಿ ಬಿ.ಎಲ್.ಸಂತೋಷ್, ರಾಜ್ಯಾಧ್ಯಕ್ಷ ನಳೀನ್ಕುಮಾರ್ ಕಟೀಲ್ ಹಾಗೂ ಕೆಲವು ಸಚಿವರು, ಶಾಸಕರನ್ನು ಭೇಟಿಯಾಗಿದ್ದರು.
ಇದರ ನಡುವೆಯೇ ಜಾರಕಿಹೊಳಿ ಏಕಾಏಕಿ ದೆಹಲಿಗೆ ತೆರಳಿರುವುದು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ. ಇದಕ್ಕೂ ಮುನ್ನ ಬೆಳಗ್ಗೆ ಸದಾಶಿವನಗರದ ತಮ್ಮ ನಿವಾಸದಲ್ಲಿ ಜಾರಕಿಹೊಳಿ ಅವರೊಂದಿಗೆ ಸಚಿವೆ ಶಶಿಕಲಾ ಜೊಲ್ಲೆ, ಮಾಜಿ ರಾಜ್ಯಸಭಾ ಸದಸ್ಯ ಪ್ರಭಾಕರ್ ಕೋರೆ, ಶಾಸಕರಾದ ರಾಜುಗೌಡ ನಾಯಕ್ ಸೇರಿದಂತೆ ಮತ್ತಿತರ ಶಾಸಕರು ಸಭೆ ನಡೆಸಿದ್ದರು.
ಅತ್ತ ದೆಹಲಿಯಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಬಿ.ಎಲ್.ಸಂತೋಷ್ ಅವರನ್ನು ಭೇಟಿಯಾಗಿದ್ದರೆ, ಇತ್ತ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಚಾರ್ಯ ನಿವಾಸದಲ್ಲೂ ಕೆಲಸ ಶಾಸಕರು ಸಭೆ ನಡೆಸಿದ್ದಾರೆ. ಹೀಗೆ ಬಿಜೆಪಿ ವಲಯದಲ್ಲಿ ಸಂಪುಟ ವಿಸ್ತರಣೆ ಹಾಗೂ ಪುನಾರಚನೆ ಕುರಿತಂತೆ ಗುಪ್ತವಾಗಿ ಸಭೆಗಳು ನಡೆಯುತ್ತಿರುವುದು ಕುತೂಹಲಕ್ಕೆ ಕಾರಣವಾಗುತ್ತಿದೆ.
ಒಂದು ಮೂಲದ ಪ್ರಕಾರ ದೆಹಲಿಗೆ ತೆರಳುತ್ತಿರುವ ಜಾರಕಿಹೊಳಿ ಮತ್ತೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡ, ಬಿ.ಎಲ್.ಸಂತೋಷ್ ಸೇರಿದಂತೆ ಮತ್ತಿತರ ನಾಯಕರನ್ನು ಭೇಟಿ ಮಾಡಿ ಮಾತುಕತೆ ನಡೆಸುವ ಸಂಭವವಿದೆ. ಸುದ್ದಿಗಾರರೊಂದಿಗೆ ಮಾತನಾಡಿದ ರಮೇಶ್ ಜಾರಕಿಹೊಳಿ, ಪಕ್ಷದ ನಾಯಕರ ಸೂಚನೆ ಮೇರೆಗೆ ದೆಹಲಿಗೆ ಹೋಗುತ್ತಿದ್ದೇನೆ. ನನಗೆ ರಾಷ್ಟ್ರೀಯ ನಾಯಕರಿಂದ ದೂರವಾಣಿ ಕರೆ ಬಂದಿತ್ತು ಎಂದು ಹೇಳಿದರು.
ನಾನೇನೂ ಪ್ರಭಾವಿ ನಾಯಕನಲ್ಲ. ನನ್ನನ್ನು ಮಾಧ್ಯಮದವರೇ ಸ್ಟ್ರಾಂಗ್ ಎಂದು ಬಿಂಬಿಸುತ್ತಿದ್ಧಾರೆ. ಅದಕ್ಕೆ ನಾನೇನು ಮಾಡಲಿ. ನಾನು ಡಿಸಿಎಂ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದೇನೆ ಎಂಬುದು ಆಧಾರ ರಹಿತ ಆರೋಪ. ಅಂತಹ ಯಾವುದೇ ಬೇಡಿಕೆಗಳನ್ನು ಇಟ್ಟಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ಕೊಟ್ಟಿರುವ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಣೆ ಮಾಡುತ್ತಿದ್ದೇನೆ ಎಂದರು.
ನಾನು ನೀರಾವರಿ ಸಚಿವನಾಗಿರುವುದರಿಂದ ಕೆಲಸದ ನಿಮಿತ್ತ ಶಾಸಕರು ಮತ್ತು ಸಚಿವರು ನನ್ನ ಮನೆಗೆ ಭೇಟಿ ಕೊಡುತ್ತಾರೆ. ಅದಕ್ಕೆ ರಾಜಕೀಯ ಅರ್ಥ ಕಲ್ಪಿಸುವುದು ಬೇಡ ಎಂದರು. 105 ಶಾಸಕರಿಂದ ಸರ್ಕಾರ ರಚನೆಯಾಗಿದೆ ಎಂಬ ಶಾಸಕ ರೇಣುಕಾಚಾರ್ಯ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರು ಹೇಳಿರುವುದರಲ್ಲಿ ಯಾವ ತಪ್ಪು ಇಲ್ಲ. 105ರ ಜೊತೆ 17 ಶಾಸಕರು ಸೇರಿ ಸರ್ಕಾರ ರಚನೆಯಾಯಿತು. ಇದು ಎಲ್ಲರಿಗೂ ಗೊತ್ತಿರುವ ಸತ್ಯ ಎಂದರು.
ವಿಧಾನಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ಗೆ ಸಚಿವ ಸ್ಥಾನ ಕೊಡುವುದಕ್ಕೆ ಕೆಲವರು ವಿರೋಸುತ್ತಿದ್ದಾರೆ. ಈಗಲೂ ಕೂಡ ನಾನು ಹೇಳುತ್ತಿದ್ದೇನೆ, ಯೋಗೆಶ್ವರ್ ಅವರಿಗೆ ಸಚಿವ ಸ್ಥಾನ ಕೊಡಿಸುವಂತೆ ಪಕ್ಷದ ಮುಖಂಡರೊಂದಿಗೆ ಮಾತನಾಡುವುದು ನನ್ನ ಕರ್ತವ್ಯ. ಇದಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿದರೂ ಚಿಂತೆಯಿಲ್ಲ.ಕೊನೆಯವರೆಗೂ ನಾನು ಪ್ರಯತ್ನ ಮಾಡುತ್ತೇನೆ ಎಂದರು.
ಈಗಾಗಲೇ ಕೆಲ ಶಾಸಕರಿಗೆ ನೇರವಾಗಿ ಹೇಳಿದ್ದೇನೆ. ಯೋಗೇಶ್ವರ್ಗೆ ಸಚಿವ ಸ್ಥಾನ ಕೊಟ್ಟರೂ ಸರಿ, ಕೊಡದಿದ್ದರೂ ಸರಿ ಯಾರೊಬ್ಬರೂ ಬೇಸರ ಮಾಡಿಕೊಳ್ಳಬಾರದು ಎಂದರು. ಕೊನೆ ಕ್ಷಣದವರೆಗೂ ನಾನು ಯೋಗೇಶ್ವರ್ ಪರವಾಗಿಯೇ ಇರುತ್ತೇನೆ ಎಂದು ಜಾರಕಿಹೊಳಿ ಸ್ಪಷ್ಟಪಡಿಸಿದರು.