ನವದೆಹಲಿ: ಮೇಕೆದಾಟು ಸಮಾನಾಂತರ ಅಣೆಕಟ್ಟು ನಿರ್ಮಾಣ ಯೋಜನೆಗೆ ಬೇಕಾಗಿರುವ ಕೇಂದ್ರ ಸರ್ಕಾರದ ವಿವಿಧ ಅನುಮತಿಗಳನ್ನು ಶೀಘ್ರವಾಗಿ ಒದಗಿಸುವಂತೆ ರಾಜ್ಯದ ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರು ಕೇಂದ್ರ ಜಲಶಕ್ತಿ ಸಚಿವರಾದ ಗಜೇಂದ್ರ ಸಿಂಗ್ ಶೇಖಾವತ್ ಅವರಿಗೆ ಮನವಿ ಮಾಡಿದ್ದಾರೆ.
ನವದೆಹಲಿಯ ಶ್ರಮಶಕ್ತಿ ಭವನದಲ್ಲಿರುವ ಕೇಂದ್ರ ಜಲಶಕ್ತಿ ಸಚಿವರ ಕಚೇರಿಯಲ್ಲಿ ಕೇಂದ್ರ ಜಲಶಕ್ತಿ ಸಚಿವರಾದ ಶ್ರೀ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿಯಾಗಿ ಅವರು ಮಾತನಾಡಿದರು.
ರಾಜ್ಯದ ವಿವಿಧ ಯೋಜನೆಗಳ ಕುರಿತು ಕೇಂದ್ರ ಸರಕಾರ ನೀಡಬೇಕಿರುವ ಅನುಮತಿಗಳ ಕುರಿತು ಕೇಂದ್ರ ಸಚಿವರ ಜೊತೆ ಮಾತನಾಡಿದ ಅವರು, ಸುಪ್ರೀಂಕೋರ್ಟ್ ನಿರ್ದೇಶನದಂತೆ ಬೆಂಗಳೂರಿಗೆ 4.75 ಟಿ.ಎಂ.ಸಿ ಕುಡಿಯುವ ನೀರನ್ನು ಒದಗಿಸುವ ಸಲುವಾಗಿ ಮೇಕೆದಾಟು ಸಮಾನಾಂತರ ಅಣೆಕಟ್ಟು ನಿರ್ಮಾಣ ಅವಶ್ಯಕತೆ ಇದ್ದು, ಇದಕ್ಕಾಗಿ ಬಾಕಿ ಇರುವ ಅನುಮತಿ ಒದಗಿಸಲು ಸಹಕರಿಸುವಂತೆ ಸಚಿವ ರಮೇಶ್ ಜಾರಕಿಹೊಳಿ ಮನವಿ ಮಾಡಿದರು.
ಕೃಷ್ಣಾ ಜಲ ವಿವಾದಕ್ಕೆ ಸಂಬಂಧಿಸಿದಂತೆ ತುರ್ತಾಗಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಬೇಕು ಹಾಗೂ ಕೃಷಾ ್ಣ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸಬೇಕೆಂದು ಇದೇ ಸಂದರ್ಭದಲ್ಲಿ ಜಲಶಕ್ತಿ ಸಚಿವರನ್ನು ಕೋರಿದರು.
ಕೃಷ್ಣಾ ನದಿ ನೀರು ಹಂಚಿಕೆಯ ವಿಷಯದಲ್ಲಿ ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ನಡುವಿನ ಜಲ ವಿವಾದವನ್ನು ಆಯಾ ರಾಜ್ಯಗಳೇ ನ್ಯಾಯಾಧಿಕರಣದಲ್ಲಿ ಬಗೆ ಹರಿಸಿಕೊಳ್ಳಬೇಕು. ಕರ್ನಾಟಕದ ಪಾಲಿನ ನೀರನ್ನು ಯಾವುದೇ ಕಾರಣಕ್ಕೂ ಮರು ಹಂಚಿಕೆ ಮಾಡಬಾರದು ಮತ್ತು ಈ ವಿಷಯದಲ್ಲಿ ಕೇಂದ್ರ ಸರ್ಕಾರ ಯಾವುದೇ ಮಧ್ಯಸ್ಥಿಕೆ ವಹಿಸಬಾರದೆಂದು ಇದೇ ಸಂದರ್ಭದಲ್ಲಿ ಸಚಿವ ರಮೇಶ್ ಜಾರಕಿಹೊಳಿ ರವರು ಕೇಂದ್ರ ಜಲಶಕ್ತಿ ಸಚಿವರನ್ನು ಒತ್ತಾಯಿಸಿದರು.