Breaking News

●ಅತಿವೃಷ್ಟಿ: ಮುನ್ನೆಚ್ಚರಿಕೆಗೆ ಸಚಿವ ರಮೇಶ್ ಜಾರಕಿಹೊಳಿ ಸೂಚನೆ. ●ಕೋವಿಡ್ ನಿಯಂತ್ರಣ: ನಿರ್ಲಕ್ಷ್ಯ ಸಲ್ಲದು; ಅಧಿಕಾರಿಗಳಿಗೆ ಸಚಿವರ ತಾಕೀತು


ಬೆಳಗಾವಿ, ಅ.16: ನೆರೆಯ ಮಹಾರಾಷ್ಟ್ರದಲ್ಲಿ ಮಳೆಯ ಪ್ರಮಾಣ ಕಡಿಮೆಗೊಂಡಿರುವುದರಿಂದ ಜಿಲ್ಲೆಯಲ್ಲಿ ಯಾವುದೇ ಆತಂಕವಿಲ್ಲ. ಆದಾಗ್ಯೂ ಮಳೆಯ ಪ್ರಮಾಣ ಹೆಚ್ಚಾದರೆ ಅದನ್ನು ಗಮನದಲ್ಲಿರಿಸಿಕೊಂಡು ಆಲಮಟ್ಟಿ ಜಲಾಶಯದಿಂದ ಇನ್ನಷ್ಟು ನೀರು ಬಿಡುಗಡೆ ಮಾಡಲು ಮುನ್ನೆಚ್ಚರಿಕೆಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಹಾಗೂ ಜಲಸಂಪನ್ಮೂಲ ಇಲಾಖೆಯ ಸಚಿವರಾದ ರಮೇಶ್ ಜಾರಕಿಹೊಳಿ ಸೂಚನೆ ನೀಡಿದರು.

ಅತಿವೃಷ್ಟಿ ಹಾಗೂ ಕೋವಿಡ್ ನಿರ್ವಹಣೆಗೆ ಸಂಬಂಧಿಸಿದಂತೆ ನಗರದ ಪ್ರವಾಸಿಮಂದಿರದಲ್ಲಿ ಶುಕ್ರವಾರ (ಅ.16) ನಡೆದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕೃಷ್ಣಾ ನದಿಯಲ್ಲಿ ನೀರಿನ ಹರಿವು 2.30 ಲಕ್ಷ ಕ್ಯುಸೆಕ್ ಗಿಂತ ಅಧಿಕಗೊಂಡಾಗ ಮಾತ್ರ ಪ್ರವಾಹ ಪರಿಸ್ಥಿತಿ ಉಂಟಾಗುತ್ತದೆ. ಇಂದು ಮಳೆ ಕಡಿಮೆಯಾಗಿರುವುದರಿಂದ ಯಾವುದೇ ತೊಂದರೆಯಿಲ್ಲ ಎಂದರು.

ಹಿಂದೆ ಪ್ರವಾಹದಿಂದ ಮನೆಗಳ ಹಾನಿಗೆ ಸಂಬಂಧಿಸಿದಂತೆ ಈಗಾಗಲೇ ಸಮೀಕ್ಷೆ ಪೂರ್ಣಗೊಂಡಿರುವ ಕಡೆಗಳಲ್ಲಿ ತಕ್ಷಣವೇ ಪರಿಹಾರ ಹಣ ಬಿಡುಗಡೆ ಮಾಡುವಂತೆ ಸಚಿವ ಜಾರಕಿಹೊಳಿ ಅವರು ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಮಳೆಯ ಪ್ರಮಾಣ ಇದೀಗ ಕಡಿಮೆಯಾಗಿದ್ದು ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ಮನೆ ಹಾಗೂ ಬೆಳೆಹಾನಿಯ ಪರಿಶೀಲನೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದರು.

ಬೆಳೆಹಾನಿಗೆ ಸಂಬಂಧಿಸಿದಂತೆ ಜಿಲ್ಲೆಯ ರೈತರಿಗೆ ಪರಿಹಾರ ಬಿಡುಗಡೆಗೆ ಸರ್ಕಾರ ಅನುಮೋದನೆ ನೀಡಿದೆ. ಆದಷ್ಟು ಬೇಗನೆ ಪರಿಹಾರ ಬಿಡುಗಡೆ ಮಾಡಲಾಗುವುದು ಎಂದರು.
ಜಿಲ್ಲೆಯಲ್ಲಿ ಕೆಳಹಂತದಲ್ಲಿ ಇರುವ ಏಳು ಸೇತುವೆಗಳು ಮಾತ್ರ ಮಳೆಗಾಲದಲ್ಲಿ ಮುಳುಗಡೆಯಾಗುತ್ತವೆ. ಎಲ್ಲ ಕಡೆಯೂ ಪರ್ಯಾಯವಾದ ಮಾರ್ಗಗಳು ಇರುವುದರಿಂದ ಜನಸಂಚಾರಕ್ಕೆ ಯಾವುದೇ ತೊಂದರೆ ಇಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಈಗಾಗಲೇ ಆಲಮಟ್ಟಿ ಜಲಾಶಯದಿಂದ ಈಗಾಗಲೇ ಒಳಹರಿವು ಆಧರಿಸಿ ನೀರು ಬಿಡುಗಡೆ ಮಾಡಲಾಗುತ್ತಿದೆ ಎಂದು ನೀರಾವರಿ ಇಲಾಖೆಯ ಅಭಿಯಂತರ ಸಿ.ಡಿ.ಪಾಟೀಲ ಅವರು ಸಚಿವರಿಗೆ ಮಾಹಿತಿಯನ್ನು ನೀಡಿದರು.
ನಾಳೆಯವರೆಗೆ ಪರಿಸ್ಥಿತಿ ನಿಯಂತ್ರಣಕ್ಕೆ ಬರಲಿದೆ ಎಂದರು.

ಮಳೆ-ಗಾಳಿಯಿಂದ ಸ್ವಲ್ಪಮಟ್ಟಿಗೆ ಕಬ್ಬು ಬೆಳೆ ಹಾನಿಯಾಗಿದೆ. ಮೆಕ್ಕೆಜೋಳ, ಹತ್ತಿ ಬೆಳೆಗೆ ಕೂಡ ಹಾನಿ ಕಂಡುಬಂದಿದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ ತಿಳಿಸಿದರು.
ಹತ್ತಿ ಬೆಳೆಗೆ ರೋಗ ತಗುಲಿರುವುದನ್ನು ಪರಿಶೀಲಿಸಲು ವಿಜ್ಞಾನಿಗಳ ತಂಡ ಕಳಿಸಲಾಗುತ್ತಿದೆ ಎಂದರು.

ಕೋವಿಡ್-೧೯; ವೈದ್ಯಕೀಯ ಸೌಲಭ್ಯ ಒದಗಿಸಲು ಸೂಚನೆ:

ಜಿಲ್ಲೆಯಲ್ಲಿ ಆಕ್ಸಿಜನ್ ಮತ್ತು ವೆಂಟಿಲೇಟರ್ ಸೌಲಭ್ಯಗಳ ಲಭ್ಯತೆಯ ಮಾಹಿತಿಯನ್ನು ಪಡೆದುಕೊಂಡ ಸಚಿವ ರಮೇಶ್ ಜಾರಕಿಹೊಳಿ ಅವರು, ಜಿಲ್ಲಾ ಕೇಂದ್ರ ಸೇರಿದಂತೆ ಎಲ್ಲ ತಾಲ್ಲೂಕು ಸ್ಥಳಗಳಲ್ಲೂ ಅಗತ್ಯ ವೈದ್ಯಕೀಯ ಸೌಲಭ್ಯ ಲಭಿಸುವಂತೆ ಕ್ರಮಕೈಗೊಳ್ಳುವಂತೆ ಸೂಚನೆ ನೀಡಿದರು.

ಕಳೆದ ಎರಡು ಮೂರು ತಿಂಗಳಿಗೆ ಹೋಲಿಸಿದರೆ ಜಿಲ್ಲೆಯಲ್ಲಿ ಸೋಂಕಿನ ಪ್ರಮಾಣದಲ್ಲಿ ಇಳಿಮುಖವಾಗಿದೆ. ಆದರೆ ಅಧಿಕಾರಿಗಳು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ತೋರದೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ತಿಳಿಸಿದರು.

ಜಿಲ್ಲೆಯಲ್ಲಿ ಆಕ್ಸಿಜನ್, ವೆಂಟಿಲೇಟರ್ ಸೌಲಭ್ಯ ಹೊಂದಿರುವ ಬೆಡ್ ಗಳು ಸೇರಿದಂತೆ ಯಾವುದೇ ರೀತಿಯ ಕೊರತೆಯಿಲ್ಲ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ತುಕ್ಕಾರ ತಿಳಿಸಿದರು.

ಪ್ರತಿದಿನ ಸಾವಿರಕ್ಕಿಂತ ಅಧಿಕ ಪರೀಕ್ಷೆ ಮಾಡಲಾಗುತ್ತಿದ್ದು, ಸೋಂಕಿನ ಪ್ರಮಾಣದಲ್ಲಿ ಇಳಿಮುಖವಾಗಿದೆ ಎಂದು ಬಿಮ್ಸ್ ನಿರ್ದೇಶಕ ಡಾ.ದಾಸ್ತಿಕೊಪ್ಪ ತಿಳಿಸಿದರು.

ಬೆಳಗಾವಿ ನಗರ ಪೊಲೀಸ್ ಆಯುಕ್ತರಾದ ತ್ಯಾಗರಾಜನ್, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್ ಎಚ್.ವಿ., ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ನೀರಾವರಿ ನಿಗಮದ ಬೆಳಗಾವಿ ಉತ್ತರ ವಲಯದ ಮುಖ್ಯ ಎಂಜಿನಿಯರ್ ಅರವಿಂದ ಕಣಗಲಿ, ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಪಾಲಿಕೆಯ ಆಯುಕ್ತರಾದ ಜಗದೀಶ್ ಕೆ.ಎಚ್., ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ವಿ.ಮುನ್ಯಾಳ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.


About cknewskannada brastachardarshannews

ಭ್ರಷ್ಟಾಚಾರ ದರ್ಶನ ರಾಷ್ಟ್ರೀಯ ಪತ್ರಿಕೆ EDITOR/CEO : LAXMAN KHADAKBHANVI_____ MD : CHETAN KHADAKBHANVI.___________ Head office : Markhandeya Nager, near Dysp office falls road GOKAK. DIST:BELAGAVI STATE: KARNATAKA Mob : 9342271100, 9148026876

Check Also

ಎರಡು ಗ್ಯಾಂಗ್ 9 ಜನ ಡಕಾಯಿತರನ್ನು ಬಂಧಿಸಿ; ಚಿನ್ನಾಭರಣ,ನಗದು ಹಣ, ವಾಹನಗಳ ವಶಕ್ಕೆ ಪಡೆದ ಗೋಕಾಕ ಪೋಲಿಸ್!

ಗೋಕಾಕ : ಗೋಕಾಕ ಶಹರ, ಅಂಕಲಗಿ ಮತ್ತು ಗೋಕಾಕ ಗ್ರಾಮೀಣ ಹಳ್ಳಿಗಳಲ್ಲಿ ದರೋಡೆ, ಸುಲಿಗೆ, ಮೋಟಾರ ಸೈಕಲ ಕಳ್ಳತನ, ಜಾನುವಾರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ