ಬೆಳಗಾವಿ: ಜಲ ಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಮತ್ತೆ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರನ್ನು ಭೇಟಿ ಮಾಡಿದ್ದಾರೆ. ಈ ಉಭಯ ನಾಯಕರ ಭೇಟಿ ಅಚ್ಚರಿಗೆ ಕಾರಣವಾಗಿದ್ದು, ಮಹಾರಾಷ್ಟ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತಾ ? ಎಂಬ ಕುತೂಹಲ ಕೆರಳಿಸಿದೆ.
ಕಳೆದ ತಿಂಗಳಷ್ಟೇ ಫಡ್ನವಿಸ್ ಅವರನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸಿ ಬಂದಿದ್ದ ರಮೇಶ ಜಾರಕಿಹೊಳಿ, ಕೋವಿಡ್ ಹಾವಳಿ, ಲಾಕ್ ಡೌನ್ ನಿಂದಾಗಿ ಸಚಿವ ಸ್ಥಾನ ದೊರೆತ ಬಳಿಕ ಫಡ್ನವಿಸ್ ಅವರಿಗೆ ಅಭಿನಂದನೆ ಸಲ್ಲಿಸಲು ಆಗಿರಲಿಲ್ಲ. ಈ ಹೀಗಾಗಿ ಮೊನ್ನೆ ಭೇಟಿ ನೀಡಿ ಅಭಿನಂದನೆ ಸಲ್ಲಿಸಿ ಬಂದಿದ್ದೇನೆ. ಇದೊಂದು ಸೌಹಾರ್ದಯುತ ಭೇಟಿಯಾಗಿದ್ದು, ಬೇರೆ ಅರ್ಥ ಕಲ್ಪಿಸುವುದು ಬೇಡ ಎಂದು ಸಚಿವ ರಮೇಶ ಜಾರಕಿಹೊಳಿ ಅವರು ತಿಳಿಸಿದರು.
ಆದರೆ ನಿನ್ನೆ ಗುರುವಾರ ದಿಢೀರಣೆ ಮುಂಬೈ ತೆರಳಿದ ಸಚಿವ ರಮೇಶ್ ಜಾರಕಿಹೊಳಿ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರನ್ನು ಭೇಟಿ ಆಗುವ ಮೂಲಕ ರಾಜಕೀಯ ಸಂಚಲನ ಮೂಡಿಸಿದ್ದಾರೆ. ಕರ್ನಾಟಕದಲ್ಲಿ ಕಮಲ ಪಕ್ಷ ಚುಕ್ಕಾಣಿ ಹಿಡಿಯಲು ಬಹು ಮುಖ್ಯ ಪಾತ್ರ ವಹಿಸಿದ್ದ ಪ್ರಭಾವಿ ಮಂತ್ರಿ ರಮೇಶ ಜಾರಕಿಹೊಳಿ ಮಹಾರಾಷ್ಟ್ರಕ್ಕೆ ಇದೀಗ ತಿಂಗಳ ಒಳಗೆ ಮತ್ತೊಮ್ಮೆ ಭೇಟಿಯಾಗಿ ಮಾತುಕತೆ ನಡೆಸಿದ್ದು ಮಹಾರಾಷ್ಟ್ರ ರಾಜಕೀಯ ವಲಯದಲ್ಲಿ ಹೊಸ ಬೆಳವಣಿಗೆಗೆ ಕಾರಣವಾಗುತ್ತಾ ? ಎನ್ನುವ ಪ್ರಶ್ನೆ ಜನರಲ್ಲಿ ಮೂಡುತ್ತಿದೆ.
ಸದ್ಯ ಮತ್ತೆ ಉಭಯ ನಾಯಕರು ಭೇಟಿಯಾಗಿದ್ದು, ಮಹಾರಾಷ್ಟ್ರದಲ್ಲಿಯೂ ಆಪರೇಷನ್ ಕಮಲಕ್ಕೆ ಚಟುವಟಿಕೆ ಆರಂಭವಾಗಿವೆ ಎಂಬ ಗುಸುಗುಸು ಹಬ್ಬಿದೆ. ಮಹಾರಾಷ್ಟ್ರದ ಮಹಾ ವಿಕಾಸ ಆಘಾಡಿ ಸರ್ಕಾರದ ಮುಂದೆ ಸಾಹುಕಾರರ ಆಟ ನಡೆಯುತ್ತಾ ಎಂಬುವುದು ಕಾದು ನೋಡಬೇಕಿದೆ.
ಶಿವಸೇನೆ ನೇತೃತ್ವದ ಕಾಂಗ್ರೆಸ್, ಎನ್‌ಸಿಪಿ ಸರ್ಕಾರ ಅಧಿಕಾರದಲ್ಲಿರುವ ಮಹಾರಾಷ್ಟ್ರದಲ್ಲಿ ಶೀಘ್ರದಲ್ಲೇ ಬಿಜೆಪಿ ಸ್ವಂತ ಬಲದೊಂದಿಗೆ ಅಧಿಕಾರಕ್ಕೆ ಬರಲಿದೆ. ಈಗ ಆಡಳಿತದಲ್ಲಿರುವ ಮೂರೂ ಪಕ್ಷಗಳು ವಿಪಕ್ಷ ಸ್ಥಾನದಲ್ಲಿ ಕೂರಲಿವೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಗುರುವಾರ ಹೇಳಿರುವುದು ಮತ್ತಷ್ಟು ಸಂಚಲನಕ್ಕೆ ಕಾರಣವಾಗಿದೆ.