ಗೋಕಾಕ: ರೈತರು ಕೃಷಿಯೊಂದಿಗೆ ಹೈನುಗಾರಿಕೆ, ಕುರಿ ಸಾಕಾಣಿಕೆಯನ್ನು ಅಳವಡಿಸಿಕೊಂಡು ಆರ್ಥಿಕವಾಗಿ ಸದೃಢರಾಗುವಂತೆ ಶಾಸಕ ರಮೇಶ ಜಾರಕಿಹೊಳಿ ಹೇಳಿದರು.
ಅವರು, ನಗರದ ತಮ್ಮ ಗೃಹ ಕಚೇರಿಯಲ್ಲಿ ಪಶು ಪಾಲನೆ ಮತ್ತು ಪಶು ವೈದ್ಯ ಸೇವಾ ಇಲಾಖೆ ಹಾಗೂ ಕುರಿ ಮತ್ತು ಉಣ್ಣೆ ಅಭಿವೃದ್ಧಿ ಮಂಡಳಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಕುರಿಗಾಹಿಗಳಿಗೆ ಜಂತು ನಾಶಕ ಹಾಗೂ ಆರೋಗ್ಯ ವರ್ಧಕ ಔಷಧಗಳು ಮತ್ತು ಕೃತಕ ಗರ್ಭಧಾರಣೆ ಕಾರ್ಯಕರ್ತರಿಗೆ ದ್ರವಸಾರ ಜನಕ ಜಾಡಿ ವಿತರಿಸಿ ಮಾತನಾಡಿದರು.
ಕೃಷಿಯಲ್ಲಿ ಆಧುನಿಕತೆಯನ್ನು ಅಳವಡಿಸಿಕೊಂಡರೆ ಆರ್ಥಿಕ ಪ್ರಗತಿ ಸಾಧ್ಯವಾಗುತ್ತಿದ್ದು, ರೈತರು ಇದಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ತಮ್ಮ ಜೀವನಾಡಿಯಾಗಿರುವ ಜಾನುವಾರುಗಳ ಆರೋಗ್ಯಕ್ಕೂ ಹೆಚ್ಚಿನ ಮಹತ್ವ ನೀಡಿ ಇದಕ್ಕಾಗಿಯೇ ಪಶುಪಾಲನ ಇಲಾಖೆ ರೈತರಿಗೆ ಔಷಧ ಉಪಚಾರಗಳನ್ನು ನೀಡುವದರೊಂದಿಗೆ ಜಾನುವಾರುಗಳ ರಕ್ಷಣಾ ಕಾರ್ಯ ಮಾಡುತ್ತಿದ್ದು ಇದರ ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯರಾದ ಟಿ ಆರ್ ಕಾಗಲ, ಸುಧೀರ ಜೊಡಟ್ಟಿ ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳಿ, ಸುರೇಶ ಸನದಿ, ಹನಮಂತ ದುರ್ಗನ್ನವರ, ಬಿಜೆಪಿ ನಗರ ಅಧ್ಯಕ್ಷ ಭೀಮಶಿ ಭರಮನ್ನವರ, ಪಶುಪಾಲನ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಮೋಹನ ಕಮತ, ಡಾ. ಶಶಿಕಾಂತ ಕೌಜಲಗಿ ಸೇರಿದಂತೆ ಅನೇಕರು ಇದ್ದರು.