ಗೋಕಾಕ: ಅಕ್ಕತಂಗೇರಹಾಳ ಹಾಗೂ ಸುತ್ತಮುತ್ತಲಿನ ಕಾರ್ಮಿಕರು ಕೇಲಸಕ್ಕೆ ತೆರಳುವಾಗ ಚಾಲಕನ ನಿಯಂತ್ರಣ ತಪ್ಪಿ ಬೆಳಗಾವಿ ತಾಲೂಕಿನ ಕಣಬರ್ಗಿಯ ಬಳಿಯಿರುವ ಬಳ್ಳಾರಿನಾಲೆಯಲ್ಲಿ ಕ್ರೂಸರ್ ಪಲ್ಟಿಯಾಗಿ ಸ್ಥಳದಲ್ಲೆ ಏಳು ಜನ ಸಾವಿಗಿಡಾಗಿದ್ದು ಮೃತ ಕುಟುಂಬಕ್ಕೆ ಏಳು ಲಕ್ಷ ರೂಪಾಯಿ ಸರಕಾರದಿಂದ ನೀಡಲಾಗುವದು ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದ್ದಾರೆ.
ಈ ಬಗ್ಗೆ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಘಟನೆ ಕುರಿತು ಈಗಾಗಲೇ ರಾಜ್ಯದ ಮುಖ್ಯಮಂತ್ರಿಯವರೊAದಿಗೆ ಮಾತನಾಡಿ, ಮೃತ ಪ್ರತಿ ಕುಟುಂಬಕ್ಕೆ ಏಳು ಲಕ್ಷ ರೂಪಾಯಿ ಘೋಷಣೆ ಮಾಡುವಂತೆ ಮನವಿ ಮಾಡಲಾಗಿದ್ದು, ಅದರಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 5 ಲಕ್ಷ ಮತ್ತು ಜಿಲ್ಲಾಧಿಕಾರಿ ಪರಿಹಾರ ನಿಧಿಯಿಂದ 2 ಲಕ್ಷ ಸೇರಿ ಒಟ್ಟು 7 ಲಕ್ಷ ಪರಿಹಾರ ಘೋಷಿಸಲಾಗಿದೆ. ಚಿಕಿತ್ಸೆ ಪಡೆಯುತ್ತಿರುವ ಇನ್ನುಳಿದ ಕಾರ್ಮಿಕರ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಸರಕಾರವೇ ಭರಿಸಲಿದೆ ಎಂದು ತಿಳಿಸಿದರು.
ಸಂತಾಪ: ನನ್ನ ಕ್ಷೇತ್ರದ ಬಡ ಕೂಲಿ ಕಾರ್ಮಿಕರು ರಸ್ತೆ ಅಪಘಾತಕ್ಕೆ ಬಲಿಯಾಗಿದ್ದು ಅಘಾತವನ್ನು ಉಂಟು ಮಾಡಿದೆ. ಮೃತ ಕುಟುಂಬಕ್ಕೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ, ಚಿಕಿತ್ಸೆ ಪಡೆಯುತ್ತಿರುವ ಇನ್ನುಳಿದ ಕಾರ್ಮಿಕರು ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸಿದ ಅವರು, ಮತ್ತೊಮ್ಮೆ ಇಂತಹ ಘಟನೆ ಮರುಕಳಿಸದಿರಲಿ ಎಂದು ದೇವರಲ್ಲಿ ಬೇಡಿಕೊಳ್ಳುತ್ತೆನೆ ಎಂದರು.