ಬೆಂಗಳೂರು : ರಾಜ್ಯದಲ್ಲಿ ಅಸ್ತಿತ್ವದಲ್ಲಿರೋ ಬಸವರಾಜ್ ಬೊಮ್ಮಾಯಿ ನೇತೃತ್ವದ ಸರಕಾರಕ್ಕೆ ಮುನ್ನುಡಿ ಬರೆದವರು ಮಾಜಿ ಸಚಿವ ಹಾಗೂ ಬಿಜೆಪಿ ನಾಯಕ ರಮೇಶ್ ಜಾರಕಿಹೊಳಿ ಅನ್ನೋದನ್ನು ಬಿಜೆಪಿಗರೇ ಒಪ್ಪಿಕೊಳ್ಳುತ್ತಾರೆ. ಈಗ ಕರ್ನಾಟಕದ ಅನುಭವದಿಂದ ಮತ್ತೊಂದು ರಾಜ್ಯದಲ್ಲೂ ಕಮಲ ಅರಳಿಸಲು ಮುಂದಾಗಿರುವ ರಮೇಶ್ ಜಾರಕಿಹೊಳಿ ಮಹಾರಾಷ್ಟ್ರದ ರಾಜಕೀಯ (Maharashtra Politics ) ಅಸ್ತಿರತೆಗೆ ಕಾರಣವಾಗಿದ್ದು, ಮಹಾರಾಷ್ಟ್ರದಲ್ಲಿ ಆಫರೇಶನ್ ಕಮಲದ ಮೂಲಕ ಬಿಜೆಪಿಗೆ ಅಧಿಕಾರ ಕೊಡಿಸುವ ಪ್ರಯತ್ನದಲ್ಲಿದ್ದಾರೆ ಎನ್ನಲಾಗಿದೆ.ರಮೇಶ್ ಜಾರಕಿಹೊಳಿ ಆಪ್ತ ಮೂಲಗಳ ಮಾಹಿತಿ ಪ್ರಕಾರ ರಮೇಶ್ ಜಾರಕಿಹೊಳಿ ಕಳೆದ ಎರಡು ಮೂರು ದಿನಗಳಿಂದ ಮುಂಬೈನಲ್ಲಿ ಬೀಡು ಬಿಟ್ಟಿದ್ದಾರೆ. ಹೀಗೆ ಮುಂಬೈನಲ್ಲಿರೋ ರಮೇಶ್ ಜಾರಕಿಹೊಳಿ ತಮ್ಮ ರಾಜಕೀಯ ಗುರು ಎಂದೇ ಕರೆದುಕೊಳ್ಳುವ ದೇವೇಂದ್ರ ಫಡ್ನವೀಸ್ ಗೆ ದಕ್ಷಿಣೆಯಾಗಿ ಬಿಜೆಪಿ ಸರ್ಕಾರ ನಿರ್ಮಾಣಕ್ಕೆ ಪ್ರಯತ್ನಿಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗ್ತಿದೆ.
ಮಹಾರಾಷ್ಟ್ರದಲ್ಲಿ ಅಧಿಕಾರದಲ್ಲಿದ್ದ ಮಹಾ ವಿಕಾಸ್ ಅಘಾಡಿ ಸರ್ಕಾರದಲ್ಲಿ ಆಂತರಿಕ ಭಿನ್ನಮತ ತಲೆ ದೋರಿದ್ದು ಶಾಸಕರುಗಳು ರೆಸಾರ್ಟ್ ನತ್ತ ಮುಖಮಾಡಿದ್ದಾರೆ. ಹೀಗಾಗಿ ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ ನಾಯಕತ್ವದ ಸರ್ಕಾರ ಪತನಕ್ಕೆ ಕ್ಷಣಗಣನೆ ನಡೆದಿದೆ. ಈ ಮಧ್ಯೆ ರಮೇಶ್ ಜಾರಕಿಹೊಳಿ ಮುಂಬೈನಲ್ಲಿ ಬೀಡು ಬಿಟ್ಟಿರೋದು ಕುತೂಹಲಕ್ಕೆ ಕಾರಣವಾಗಿದ್ದು ರಮೇಶ್ ಜಾರಕಿಹೊಳಿ ದೇವೇಂದ್ರ ಫಡ್ನವೀಸ್ ಜೊತೆ ನಿಂತು ಸರ್ಕಾರ ರಚನೆಗೆ ಸರ್ಕಸ್ ನಡೆಸಿದ್ದಾರೆ ಎನ್ನಲಾಗಿದೆ.
ಮಂಗಳವಾರ ಮಧ್ಯಾಹ್ನದವರೆಗೂ ರಮೇಶ್ ಜಾರಕಿಹೊಳಿ ದೇವೇಂದ್ರ ಫಡ್ನವೀಸ್ ಅವರ ಜೊತೆಗಿದ್ದು ಅಘಾಡಿ ಸರ್ಕಾರದ ಶಾಸಕರುಗಳನ್ನು ಸೆಳೆಯುವಲ್ಲಿ ಸಫಲರಾಗಿದ್ದಾರೆ ಎನ್ನಲಾಗಿದೆ. ಮೊದಲಿನಿಂದಲೂ ರಮೇಶ್ ಜಾರಕಿಹೊಳಿ ಮಹಾರಾಷ್ಟ್ರದ ಶಾಸಕರುಗಳು ಹಾಗೂ ಮಂತ್ರಿಗಳ ಜೊತೆ ಉತ್ತಮ ಸಂರ್ಪಕ ಹೊಂದಿದ್ದಾರೆ. ಹೀಗಾಗಿ ಆಫರೇಶನ್ ಕಮಲದ ಹಾದಿ ಸುಗಮವಾಗಿದ್ದು, ಮಹಾರಾಷ್ಟ್ರದಲ್ಲಿ ಬಿಜೆಪಿಯ ಕಮಲ ಅರಳೋದು ಖಚಿತವಾಗ್ತಿದೆ.
ಕರ್ನಾಟಕದಲ್ಲೂ ಕಾಂಗ್ರೆಸ್ ನ ಶಾಸಕರಾಗಿದ್ದ ರಮೇಶ್ ಜಾರಕಿಹೊಳಿ ತಮ್ಮೊಂದಿಗೆ ಕಾಂಗ್ರೆಸ್ ನ 11 ಕ್ಕೂ ಅಧಿಕ ಶಾಸಕರನ್ನು ಕರೆದುಕೊಂಡು ಬಿಜೆಪಿಗೆ ಸೇರ್ಪಡೆಗೊಂಡು ಸಮ್ಮಿಶ್ರ ಸರ್ಕಾರದ ಪತನಕ್ಕೆ ಕಾರಣವಾಗಿದ್ದರು. ಈ ಮಹಾಪತನದ ಹಿಂದೆಯೂ ರಮೇಶ್ ಜಾರಕಿಹೊಳಿಯವರ ಮಾಸ್ಟರ್ ಪ್ಲ್ಯಾನ್ ಹಾಗೂ ನಿಯಂತ್ರಣ ವರ್ಕೌಟ್ ಆಗಿತ್ತು. ಈಗಲೂ ಕೂಡ ಮಹಾರಾಷ್ಟ್ರದ ಉದ್ಧವ್ ಠಾಕ್ರೆ ಸರಕಾರ ಪತನಕ್ಕೆ ರಮೇಶ್ ಜಾರಕಿಹೊಳಿ ಮುನ್ನುಡಿ ಬರೆದಿದ್ದು, ದೇವೇಂದ್ರ ಫಡ್ನವೀಸ್ ಗೆ ನೆರವಾಗುವ ಮೂಲಕ ಕೇಂದ್ರಕ್ಕೆ ತಮ್ಮ ಬಲಪ್ರದರ್ಶಿಸಿ ಸ್ಥಾನ ಭದ್ರಗೊಳಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.