ಗೋಕಾಕ : ಇಲ್ಲಿನ ಶಾಸಕ ರಮೇಶ ಜಾರಕಿಹೊಳಿ ಅವರು ವೈಯಕ್ತಿಕವಾಗಿ ಪತ್ರಗಳನ್ನು ಕಳುಹಿಸುವ ಮೂಲಕ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಎದುರಿಸಲಿರುವ ವಿದ್ಯಾರ್ಥಿಗಳಿಗೆ ಪ್ರೇರಣೆ ಮತ್ತು ಹುಮ್ಮಸ್ಸು ತುಂಬಲು ಪ್ರಯತ್ನಿಸಿದ್ದಾರೆ.
ವಿದ್ಯಾರ್ಥಿಗಳು ಹಾಗೂ ಪ್ರೌಢಶಾಲೆಯ ಸಹ ಶಿಕ್ಷಕರಿಗೆಲ್ಲ ಪತ್ರ (ಇನ್ಲ್ಯಾಂಡ್ ಲೆಟರ್) ಬರೆದದ್ದಾರೆ. ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಮಕ್ಕಳಿಗೆ ಆತ್ಮಸ್ಥೈರ್ಯ ಹೆಚ್ಚಿಸುವ ಕೆಲಸ ಮಾಡಿದ್ದಾರೆ. ಓದಿನತ್ತ ಗಮನಹರಿಸುವಂತೆ ಸಲಹೆ ನೀಡಿದ್ದಾರೆ. ಈ ಪತ್ರ ಅಭಿಯಾನ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪಾಲಕರಲ್ಲಿ ಹುಮ್ಮಸ್ಸು ಮೂಡಿಸಿದೆ ಎನ್ನುತ್ತಾರೆ ಅಧಿಕಾರಿಗಳು.
ಗೋಕಾಕ ವಲಯದ 5ಸಾವಿರ ವಿದ್ಯಾರ್ಥಿಗಳು ಹಾಗೂ ಸಹ ಶಿಕ್ಷಕರಿಗೆ ಮುದ್ರಿತ ಪತ್ರ ಕಳುಹಿಸಿ ಶುಭ ಹಾರೈಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಬಿಇಒ ಜಿ.ಬಿ. ಬಳಗಾರ, ‘ಕೊರೊನಾದಿಂದ ಭಯಭೀತರಾಗಿದ್ದ ವಿದ್ಯಾರ್ಥಿಗಳಿಗೆ ಶಾಸಕರ ಪತ್ರ ಧೈರ್ಯ ತುಂಬಿದೆ. ಓದಿನ ಆಸಕ್ತಿ ಹೆಚ್ಚಿಸಿದೆ. ಶೈಕ್ಷಣಿಕವಾಗಿ ಸದಾ ನಮಗೆ ಮಾರ್ಗದರ್ಶನ ನೀಡುತ್ತಿರುವ ಶಾಸಕರ ಈ ಪತ್ರ ಅಭಿಯಾನ ಮಕ್ಕಳಲ್ಲಿ ಪರೀಕ್ಷೆ ಬಗ್ಗೆ ಇರುವ ಭಯ ನಿವಾರಿಸಿದೆ’ ಎಂದರು.
‘ಪತ್ರ ಸಿಕ್ಕ ವಿದ್ಯಾರ್ಥಿಗಳು ಹಾಗೂ ಪಾಲಕರು ಶಾಸಕರ ವಿನೂತನ ಕಾರ್ಯವನ್ನು ಕೊಂಡಾಡಿ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ’ ಎಂದು ತಿಳಿಸಿದರು.
‘ಶಾಸಕರು ನಮಗೆ ಪತ್ರ ಬರೆದು ಹಲವು ವಿಚಾರಗಳನ್ನು ತಿಳಿಸಿದ್ದಾರೆ. ಅದನ್ನು ಓದಿ ರೋಮಾಂಚನವಾಯಿತು. ಹೆದರಿಕೆ ಇಲ್ಲದೆ ಪರೀಕ್ಷೆ ಎದುರಿಸಲು ಶಕ್ತಿ ಬಂದತಾಗಿದೆ’ ಎಂದು ಖನಗಾಂವದ ಆದರ್ಶ ವಿದ್ಯಾಲಯದ ವಿದ್ಯಾರ್ಥಿನಿ ಮೇಘಾ ಉಪ್ಪಾರ ಹೇಳಿದರು.