ಗೋಕಾಕ: ಮತಕ್ಷೇತ್ರದ ಗ್ರಾಮಗಳಲ್ಲಿ ಕೆಎಂಎಫ್ ನಿರ್ದೇಶಕ ಅಮರನಾಥ ಜಾರಕಿಹೊಳಿ ಅವರು ಗ್ರಾಮದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದರು.
ಅಮರನಾಥ ಜಾರಕಿಹೊಳಿ ಅವರು ಶಿಂದಿಕುರಬೇಟ ಗ್ರಾಮದ ಹೈಸ್ಕೂಲ್ ರಸ್ತೆ ನಿರ್ಮಾಣಕ್ಕಾಗಿ 80 ಲಕ್ಷ ರೂ. ವೆಚ್ಚದ ಕಾಮಗಾರಿ ಹಾಗೂ ಜೆಎಲ್ ಬಿಸಿ ಯೋಜನೆಯಡಿ 25 ಲಕ್ಷ ರೂ. ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.
ಪಾಮಲದಿನ್ನಿ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯಿಂದ 1.50 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಡಾಂಬರೀಕರಣ ಕಾಮಗಾರಿ ಹಾಗೂ ಜೆಎಲ್ ಬಿಸಿ ಯೋಜನೆಯಡಿ 50 ಲಕ್ಷ ಅನುದಾನದಡಿ ಸಿಸಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿದರು.
ದುಪದಾಳ ಗ್ರಾಮದ ಭೋವಿ ಗಲ್ಲಿ ಮತ್ತು ಕಂಬಾರ ಓಣಿಯಲ್ಲಿ ತಲಾ 20 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು.
ಸಾವಳಗಿ ಗ್ರಾಮದಲ್ಲಿ 1.50 ಕೋಟಿ ವೆಚ್ಚದಲ್ಲಿ ಮೂರು ಸಮುದಾಯ ಭವನ ಹಾಗೂ ಪಶು ಚಿಕಿತ್ಸಾಲಯ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು. ಸಾವಳಗಿಯಿಂದ ರೈಲ್ವೆ ನಿಲ್ದಾಣದವರೆಗೆ 3.50 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಡಾಂಬರೀಕರಣಕ್ಕೆ ಚಾಲನೆ ನೀಡಿದರು.
ನಂತರ ಗ್ರಾಮದಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಪ್ರಾಥಮಿಕ ಶಾಲೆಯ ಪ್ರಧಾನ ಗುರುಮಾತೆ ಶ್ರೀಮತಿ ರೇಣುಕಾ ಹಿರೇಮನಿ, ಮಲ್ಲಾಪೂರ ಶಾಲೆಯ ನಿವೃತ್ತ ಶಿಕ್ಷಕರಾದ ಈಶ್ವರ ರಾಜಾಪೂರ ಅವರಿಗೆ ಶಾಲಾ ಶಿಕ್ಷಕರ ವೃಂದ, ಪಂಚಾಯಿತ ಆಡಳಿತ ಮಂಡಳಿ, ಗ್ರಾಮದ ಗ್ರಾಮಸ್ಥರು ವತಿಯಿಂದ ನಡೆದ ಸತ್ಕಾರ ಸಮಾರಂಭದಲ್ಲಿ ಭಾಗವಹಿಸಿದರು.
ಶಾಲಾ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಶಾರದಾ ಮೂರ್ತಿಯ ಪೂಜಾ ಕಾರ್ಯಕ್ರಮದಲ್ಲಿ ಕೆಎಂಎಫ್ ನಿರ್ದೇಶಕ ಅಮರನಾಥ ಜಾರಕಿಹೊಳಿ ದೇವರ ಮೂರ್ತಿಗೆ ಪೂಜೆ ಸಲ್ಲಿಸಿದರು.
ಈ ಸಮಯದಲ್ಲಿ ಮಾತನಾಡಿದ ಅಮರನಾಥ ಜಾರಕಿಹೊಳಿ ಅವರು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವುದು ಶಿಕ್ಷಕರ ಜವಾಬ್ದಾರಿಯಾಗಿದೆ. ಶಿಕ್ಷಕರ ಕಾರ್ಯ ಶ್ಲಾಘನೀಯವಾಗಿದ್ದು, ಗುಣಾತ್ಮಕ ಶಿಕ್ಷಣಕ್ಕಾಗಿ ಹೆಚ್ಚಿನ ಒತ್ತು ನೀಡಿ ಕಾರ್ಯನಿರ್ವಹಿಸುತ್ತಿದ್ದಾರೆ, ಆ ನಿಟ್ಟಿನಲ್ಲಿ ಶಾಸಕ ರಮೇಶ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ಗೋಕಾಕ ಶೈಕ್ಷಣಿಕವಾಗಿ ವಲಯವೂ ಸಹ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯ. ಎಲ್ಲಾ ಮಕ್ಕಳನ್ನು ಶಾಲಾ ಶಿಕ್ಷಣದ ವ್ಯಾಪ್ತಿಯಲ್ಲಿ ತರುವ ಮೂಲಕ ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸಬೇಕಾಗಿದೆ ಆ ದಿಸೆಯಲ್ಲಿ ಶಿಕ್ಷಕರು ಕಾರ್ಯಪ್ರವೃತ್ತರಾಗಬೇಕಲ್ಲದೆ ಪಾಲಕರು ಸಹ ಶಿಕ್ಷಣ ಇಲಾಖೆಯೊಂದಿಗೆ ಸಹಕರಿಸಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಮಲ್ಲಪ್ಪ ಕೌಜಲಗಿ, ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ, ಪಿಡಿಓ ಬಬಲಿ, ತಾ ಪಂ ಸದಸ್ಯರಾದ ಶ್ರೀಮತಿ ಸಂಪಗಾರ, ಹಾಗೂ ಮಲ್ಲಪ್ಪ ಕಮತಿ, ಪಾಂಡುರಂಗ ಬೋಜಿ, ಮಹಾದೇವ ಬಟ್ನೂರೆ, ವಕೀಲರಾದ ವಿಠ್ಠಲ ಮೆಳವಂಕಿ ಹಾಗೂ ಅನೇಕರು ಉಪಸ್ಥಿತರಿದ್ದರು.