ಅರಭಾವಿ: ಸಮೀಪದ ರಾಜಾಪೂರ ಗ್ರಾಮದಲ್ಲಿ ಗಣೇಶ ಚತುರ್ಥಿ ಅಂಗವಾಗಿ ಬೀರಸಿದ್ದೇಶ್ವರ ಗಜಾನನ ಯುವಕ ಮಂಡಳದ ವತಿಯಿಂದ ಇಂದು ಹಮ್ಮಿಕೊಂಡಿದ್ದ ಗಜಾನನ ಉತ್ಸವಕ್ಕೆ ಯುವ ಮುಖಂಡರಾದ ರಾಹುಲ್ ಜಾರಕಿಹೊಳಿ ಹಾಗೂ ಸರ್ವೋತ್ತಮ ಜಾರಕಿಹೊಳಿ ಅವರು ಚಾಲನೆ ನೀಡಿದರು.
ನಂತರ ಮಾತನಾಡಿದ ರಾಹುಲ್ ಜಾರಕಿಹೊಳಿ ಅವರು, ಯುವಕ ಮಂಡಳದಿಂದ ಗ್ರಾಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಕ್ರೀಡಾಕೂಟಗಳನ್ನು ಆಯೋಜಿಸಬೇಕು. ಜೊತೆಗೆ ಗ್ರಾಮದಲ್ಲಿನ ಎಲ್ಲ ಮಕ್ಕಳು ಶಿಕ್ಷಣ ಪಡೆಯುವಂತೆ ಸಂಘದಿಂದ ಮಕ್ಕಳನ್ನು ಪ್ರೋತ್ಸಾಹಿಸಬೇಕೆಂದು ಸಲಹೆ ನೀಡಿದರು.
ಸರ್ವೋತ್ತಮ ಜಾರಕಿಹೊಳಿ ಅವರು ಮಾತನಾಡಿ, ಯುವಕರು ಗ್ರಾಮದ ಅಭಿವೃದ್ಧಿಗೆ ಕೈಜೋಡಿಸಬೇಕು. ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ರಾಹುಲ್ ಅವರು ಚುನಾವಣೆಗೆ ದುಮುಕಲಿ:
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಚೂನಪ್ಪ ಪೂಜೇರಿ ಮಾತನಾಡಿ, ರಾಹುಲ್ ಜಾರಕಿಹೊಳಿ ಅವರಲ್ಲಿ ನಾಯಕತ್ವ ಗುಣವಿದ್ದು, ಸಮಾಜದ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳಬೇಕೆಂಬ ತುಡಿತವಿದೆ. ಅವರಿಗೆ ಸಾವಿರಾರು ಅಭಿಮಾನಿಗಳಿದ್ದಾರೆ. ಹೀಗಾಗಿ, ರಾಹುಲ್ ಅವರು ಚುನಾವಣೆಗೆ ದುಮುಕಬೇಕು. ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲರೂ ಜೋರಾಗಿ ಚಪ್ಪಾಳೆ ತಟ್ಟುವ ಮೂಲಕ ಇದಕ್ಕೆ ಬೆಂಬಲ ವ್ಯಕ್ತಪಡಿಸಿದರು. ರಾಹುಲ್ ಪರ ನೂರಾರು ಯುವಕರು ಜಯಘೋಷ ಕೂಗಿದರು.
ಕಾರ್ಯಕ್ರಮದಲ್ಲಿ ಯುವಕ ಮಂಡಳದ ವತಿಯಿಂದ ರಾಹುಲ್ ಹಾಗೂ ಸರ್ವೋತ್ತಮ ಜಾರಕಿಹೊಳಿ ಅವರನ್ನು ಸನ್ಮಾನಿಸಲಾಯಿತು.
ಮುಖಂಡರಾದ ಶಿವಾನಂದ ಕಮತಿ, ಸಿದ್ರಾಯ ಮರಿಸಿದಪ್ಪಗೋಳ, ಬೈರಪ್ಪ ಯಕ್ಕುಂಡಿ, ವಿನಯ ಪಾಟೀಲ್, ಮುರಳಿ ಬಡಿಗೇರ, ಶ್ರೀಶೈಲ ಅಂಗಡಿ, ಸಿದ್ದು ಕಂಕಣವಾಡಿ, ರಾಯಪ್ಪ ಬಂಡೋಳ್ಳಿ, ಗೋಪಾಲ ಪಾಕನಟ್ಟಿ, ಸಿದ್ದಪ್ಪ, ಕಳಸಣ್ಣವರ್, ಸಚಿನ್ ಸೇರಿ ಯುವಕ ಮಂಡಳದ ಸದಸ್ಯರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.