ಬೆಳಗಾವಿ: ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆ ಸ್ಟೂಡೆಂಟ್ ಪೋರ್ಟಲ್‌ನಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿರುವ ತಾಂತ್ರಿಕ ಸಮಸ್ಯೆ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ (ಆರ್‌ಸಿಯು) ವಿದ್ಯಾರ್ಥಿಗಳನ್ನು ಹೈರಾಣಾಗಿಸಿದೆ. ಆರ್‌ಸಿಯು ವ್ಯಾಪ್ತಿಯಲ್ಲಿ 400 ಪದವಿ ಕಾಲೇಜುಗಳಿದ್ದು, 1 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಬಿ.ಎ, ಬಿಬಿಎ, ಬಿಸಿಎ, ಬಿ.ಎಸ್ಸಿ, ಬಿಎಸ್‌ಡಬ್ಲ್ಯು 1, 3 ಮತ್ತು 5ನೇ ಸೆಮಿಸ್ಟರ್ ವಿದ್ಯಾರ್ಥಿಗಳಿಂದ ಪರೀಕ್ಷಾ ಅರ್ಜಿ ಆಹ್ವಾನಿಸಲಾಗಿದ್ದು, ಜ.6ರಿಂದ 31ರವರೆಗೆ ಈ ಪೋರ್ಟಲ್‌ನಲ್ಲಿ ದಂಡರಹಿತವಾಗಿ ಪರೀಕ್ಷಾ ಶುಲ್ಕ ಭರಿಸಲು ಅವಕಾಶವಿತ್ತು. ಆದರೆ, ತಾಂತ್ರಿಕ ಸಮಸ್ಯೆಯಿಂದಾಗಿ ಹಲವು ವಿದ್ಯಾರ್ಥಿಗಳಿಗೆ ಮಂಗಳವಾರ ಸಂಜೆಯವರೆಗೂ ಅರ್ಜಿ ತುಂಬಲು ಸಾಧ್ಯವಾಗಿಲ್ಲ. ಹೀಗಾಗಿ, ಫೆ.1ರಿಂದ ಅವರು ದಿನಕ್ಕೆ ₹100 ದಂಡದೊಂದಿಗೆ ಪರೀಕ್ಷಾ ಶುಲ್ಕ ಭರಿಸುವ ಅನಿವಾರ್ಯತೆ ಎದುರಾಗಿದೆ.
ವಿ.ವಿ ಕಚೇರಿಗೆ ಅಲೆದಾಟ: ‘ಪ್ರವೇಶ ಪ್ರಕ್ರಿಯೆ, ಪರೀಕ್ಷಾ ಶುಲ್ಕ ಭರಿಸುವುದು, ಅಂಕಪಟ್ಟಿಗಳು ಹಾಗೂ ಪದವಿ ಪ್ರಮಾಣಪತ್ರಗಳನ್ನು ತ್ವರಿತವಾಗಿ ಪಡೆಯಲು ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಸರ್ಕಾರ ಯುಯುಸಿಎಂಎಸ್ ಜಾರಿಗೊಳಿಸಿದೆ. ಆದರೆ, ರಾಜ್ಯದಾದ್ಯಂತ ವಿವಿಧ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಏಕಕಾಲಕ್ಕೆ ಲಾಗಿನ್ ಮಾಡುವುದರಿಂದ ಪೋರ್ಟಲ್‌ನಲ್ಲಿ ಆಗಾಗ ತಾಂತ್ರಿಕ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಕೆಲವರು ಪರೀಕ್ಷಾ ಶುಲ್ಕ ಭರಿಸಿದ್ದರೂ, ಮಾಹಿತಿ ತೋರಿಸುತ್ತಿಲ್ಲ. ಸಮಸ್ಯೆ ಕುರಿತು ವಿಚಾರಿಸಿ
ದರೆ ಕಾಲೇಜಿನವರು ಸರಿಯಾಗಿ ಮಾಹಿತಿ ನೀಡುತ್ತಿಲ್ಲ.
ಹಾಗಾಗಿ ವಿಶ್ವವಿದ್ಯಾಲಯ ಕಚೇರಿಗೆ ಎಡತಾಕುವಂತಾಗಿದೆ’
‘ಸರ್ಕಾರ ನಿಗದಿಪಡಿಸಿದ ಅವಧಿಯಲ್ಲೇ ಪರೀಕ್ಷಾ ಶುಲ್ಕ ಭರಿಸಲು 2-3 ದಿನಗಳಿಂದ ಸೈಬರ್ ಸೆಂಟರ್‌ಗಳಿಗೆ ಹೋಗುತ್ತಿದ್ದೇವೆ. ಎಷ್ಟು ಬಾರಿ ಪ್ರಯತ್ನಿಸಿದರೂ ಪೋರ್ಟಲ್‌ನಲ್ಲಿ ಅರ್ಜಿ ತುಂಬಲಾಗುತ್ತಿಲ್ಲ. ಯಾರೋ ಮಾಡಿದ ತಪ್ಪಿಗೆ ನಾವು ದಂಡ ಭರಿಸಬೇಕಾದ ಪರಿಸ್ಥಿತಿ ಬಂದಿದೆ. ವಿ.ವಿಯವರು ಕೂಡಲೇ ಎಚ್ಚೆತ್ತುಕೊಂಡು ಫೆಬ್ರುವರಿ ಮೊದಲ ವಾರದಲ್ಲಿ ದಂಡ ರಹಿತವಾಗಿ ಅರ್ಜಿ ತುಂಬಲು ಅವಕಾಶ ನೀಡಬೇಕು’ ಎಂದು ಆಗ್ರಹಿಸಿದರು.
ಆರ್‌ಸಿಯು ವ್ಯಾಪ್ತಿಯಲ್ಲಿ ಪದವಿಯ 6ನೇ ಸೆಮಿಸ್ಟರ್ ಕೋರ್ಸ್‌ಗಳಲ್ಲಿ ಇತ್ತೀಚೆಗೆ ಉತ್ತೀರ್ಣರಾದ ವಿದ್ಯಾರ್ಥಿಗಳು ಡಿಜಿ-ಲಾಕರ್‌ನಲ್ಲಿ ಅಂಕಪಟ್ಟಿ ಡೌನ್‌ಲೋಡ್ ಮಾಡಿಕೊಳ್ಳಲು ಯತ್ನಿಸುತ್ತಿದ್ದಾರೆ. ಆದರೆ, ತಾಂತ್ರಿಕ ದೋಷದಿಂದ ಹಲವು ವಿದ್ಯಾರ್ಥಿಗಳಿಗೆ ಅಂಕಪಟ್ಟಿ ಡೌನ್‌ಲೋಡ್ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಇದರಿಂದ ಅತಂತ್ರರಾಗಿರುವ ವಿದ್ಯಾರ್ಥಿಗಳು, ವಿ.ವಿ ಕಚೇರಿಗೆ ಕರೆ ಮಾಡಿ ವಿಚಾರಿಸುವುದು ಸಾಮಾನ್ಯವಾಗಿದೆ. ಆದರೆ ವಿವಿ ಅವರು ಕರೆಯನ್ನೆ ಸ್ವಿಕಾರ ಮಾಡುವುದಿಲ್ಲ. ನೂರಾರು ಕಿಲೋಮೀಟರ್ ದೂರದಿಂದ ವಿದ್ಯಾರ್ಥಿಗಳು ಬಂದು ಅರ್ಜಿ ಸಲ್ಲಿಸಿ ಎರಡು ಮೂರು ದಿನ ಕಾಯಲೆಬೇಕು.
ಮಾಹಿತಿ ನೀಡದ ಕಾಲೇಜುಗಳು : ಒಂದಿಷ್ಟು ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಅಂಕಪಟ್ಟಿ , ಉತ್ತೀರ್ಣವಾದ ಪ್ರಮಾಣಪತ್ರದ ಬಗ್ಗೆ ಕೇಳಿದಾಗ ವಿದ್ಯಾರ್ಥಿಗಳಿಗೆ ಸರಿಯಾದ ಮಾಹಿತಿ ಸಹ ನೀಡುವುದಿಲ್ಲ. ಕೆಲವೊಂದಿಷ್ಟು ವಿದ್ಯಾರ್ಥಿಗಳ ಅಂಕಪಟ್ಟಿಗಾಗಿ ಪರದಾಡುವಂತಾಗಿದೆ ಏಕೆಂದರೆ ಕಾಲೇಜುಗಳಲ್ಲಿ ಕೇಳಿದರೆ ಯೂನಿವರ್ಸಿಟಿ ಅವರು ಕಲಿಸಲ್ಲ ಅಂತ ಹೇಳ್ತಾರೆ, ಯೂನಿವರ್ಸಿಟಿ ಅಲ್ಲಿ ಕೇಳಿದರೆ ನಿಮ್ಮ ಕಾಲೇಜುಗಳಲ್ಲಿ ಕಳಿಸಿದ್ದೇವೆ ಎನ್ನುತ್ತಾರೆ ಆದರೆ ಅಂಕಪಟ್ಟಿಗೆ ಸರಿಯಾಗಿ 120 ರೂಪಾಯಿ ಹಣವನ್ನು ತಪ್ಪದೇ ತುಂಬಿಸಿಕೊಳ್ಳುತ್ತಾರೆ ಇದರಲ್ಲಿ ಪಾಪ ಅದೇಷ್ಟೋ ಪ್ರತಿಭಾವಂತ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಇದರ ಬಗ್ಗೆ ಮಾನ್ಯ ಉನ್ನತ ಶಿಕ್ಷಣ ಸಚಿವರು ಆದಷ್ಟೂ ಕ್ರಮ ಕೈಗೊಳ್ಳಬೇಕು ಎಂದು ನೊಂದ ವಿದ್ಯಾರ್ಥಗಳು ಆಗ್ರಹಿಸಿದ್ದಾರೆ.