ಬೆಂಗಳೂರು: ರಾಜ್ಯದಲ್ಲಿ ಮಾನ್ಸೂನ್ ಪೂರ್ವ ಮಳೆಯಿಂದಾಗಿ ಭಾರೀ ಅನಾಹುತವೇ ಸಂಭವಿಸಿದೆ. ದಿಢೀರ್ ಸುರಿದಂತ ಭಾರೀ ಮಳೆಯಿಂದಾಗಿ ರಾಜ್ಯಾಧ್ಯಂತ ಇಲ್ಲಿಯವರೆಗೆ 9 ಮಂದಿ ಸಾವನ್ನಪ್ಪಿದ್ದರೇ, 29 ಮನೆಗಳು ಸಂಪೂರ್ಣ ಹಾನಿಗೊಂಡಿವೆ.
ಈ ಕುರಿತಂತೆ ಕಂದಾಯ ಇಲಾಖೆ ಮಾಹಿತಿ ಬಿಡುಗಡೆ ಮಾಡಿದ್ದು, ಇದುವರೆಗೆ ಬೇಸಿಗೆ ಮಳೆಯಿಂದಾಗಿ 9 ಮಂದಿಗೆ ಸಾವನ್ನಪ್ಪಿದ್ದಾರೆ.204 ಹೆಕ್ಟೇರ್ ಕೃಷಿ ಬೆಳೆ ಹಾನಿಯಾಗಿದೆ. 431 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಯಾಗಿದೆ. 29 ಮನೆಗಳು ಸಂಪೂರ್ಣ ಹಾನಿಗೊಂಡಿರೋದಾಗಿ ತಿಳಿಸಿದೆ.
ರಾಜ್ಯಾಧ್ಯಂತ ಭಾರೀ ಮಳೆಯ ಹಿನ್ನಲೆಯಲ್ಲಿ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳೋ ನಿಟ್ಟಿನಲ್ಲಿ, ಕಂದಾಯ ಸಚಿವ ಆರ್ ಅಶೋಕ್ ಕೂಡ ವಿಕಾಸಸೌಧದಲ್ಲಿ ಎಲ್ಲಾ ಜಿಲ್ಲೆಗಳ ಡಿಸಿ ಜೊತೆಗೆ ವೀಡಿಯೋ ಕಾನ್ಫೆರೆನ್ಸ್ ಮೂಲಕ ಸಭೆ ನಡೆಸಿದರು.
ಈ ಸಭೆಯಲ್ಲಿ ಮಳೆಯಿಂದ ಹಾನಿಗೊಳಗಾದ ಬೆಳೆಗೆ ಪರಿಹಾರ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು. ಅಲ್ಲದೇ ಇನ್ನೂ ಮೂರು ನಾಲ್ಕು ದಿನ ಮಳೆ ಬೀಳುವ ಕಾರಣ, ರಕ್ಷಣಾ ಕಾರ್ಯಾಚರಣೆಯನ್ನು ಚುರುಕುಗೊಳಿಸುವಂತೆ ಸೂಚಿಸಿದರು.
ಇದಷ್ಟೇ ಅಲ್ಲದೇ ಎಲ್ಲೇ ಭೂ ಕುಸಿತ, ಹಾನಿ ಸಂಭವಿಸಿದ್ರು, ಖುದ್ಧು ಜಿಲ್ಲಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸುವಂತೆ ಸೂಚಿಸಿದಂತ ಅವರು, ಮನೆ, ಪ್ರಾಣ ಹಾನಿಯಾದಲ್ಲಿ 48 ಗಂಟೆಗಳಲ್ಲೇ ಪರಿಹಾರ ವಿತರಿಸುವಂತೆಯೂ ಖಡಕ್ ಸೂಚನೆ ನೀಡಿದರು.