ಬೆಂಗಳೂರು : 2021ರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗೆ ಈ ಹಿಂದಿನ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶವನ್ನು ತಿರಸ್ಕರಣೆ ಮಾಡಿ, ಪುನರಾವರ್ತಿತ ಅಭ್ಯರ್ಥಿಯಾಗಿದ್ದರೇ, ಹಿಂದಿನ ಪರೀಕ್ಷೆಯ ಅಂಕ ಪಡೆಯಬಹುದು, ಇಲ್ಲವೇ ಫಲಿತಾಂಶ ಘೋಷಣೆಯ ಬಗ್ಗೆ ಅವಕಾಶವನ್ನು ನೀಡಿ ತಮ್ಮ ನಿಲುವನ್ನು ಅರ್ಜಿಯೊಂದಿಗೆ ಸಲ್ಲಿಸಲು ಜುಲೈ.12, 2021ರವರೆಗೆ ಅವಕಾಶ ನೀಡಲಾಗಿದೆ
ಈ ಕುರಿತಂತೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದು, ಕೋವಿಡ್-19ರ ಸಾಂಕ್ರಾಮಿಕ ರೋಗದ ತೀವ್ರತೆ ಹೆಚ್ಚಾಗುತ್ತಿದ್ದ ಹಿನ್ನಲೆಯಲ್ಲಿ ಹಾಗೂ ವಿದ್ಯಾರ್ಥಿಗಳ ಹಿತದೃಷ್ಠಿಯಿಂದ 2021ರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯನ್ನು ರದ್ದುಗೊಳಿಸಿದೆ.
2019ರ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ, 2020ರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಮತ್ತು 2020ರ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಗಳಲ್ಲಿ ಉತ್ತೀರ್ಣ, ಅನುತ್ತೀರ್ಣಗೊಂಡ ವಿದ್ಯಾರ್ಥಿಗಳು ಉತ್ತೀರ್ಣಗೊಂಡ ವಿಷಯಗಳಿಗೆ ನಿಯಮಾನುಸಾರ ಫಲಿತಾಂಶವನ್ನು ತಿರಸ್ಕರಿಸಿ, 2021ರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗೆ ನೋಂದಾಯಿಸಿಕೊಂಡಿರುವ ವಿದ್ಯಾರ್ಥಿಗಳು, ಈ ಹಿಂದಿನ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶದಲ್ಲಿ ಪಡೆದ ಅಂಕಗಳನ್ನೇ ಮರು ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ಅಂತಹ ವಿದ್ಯಾರ್ಥಿಗಳು ಹಿಂದಿನ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶದಲ್ಲಿ ಪಡೆದ ಅಂಕಗಳನ್ನೇ ಮರುಪಡೆಯಲು ತಮ್ಮ ಕಾಲೇಜುಗಳ ಪ್ರಾಂಶುಪಾಲರುಗಳ ಮೂಲಕ ನಿಯಮಾನುಸಾರ ಅರ್ಜಿಯನ್ನು ಮುಚ್ಚಳಿಕೆ ಪತ್ರ ಸಹಿತ ಸಲ್ಲಿಸಲು ಅವಕಾಶ ಕಲ್ಪಿಸಿದೆ.
ವಿದ್ಯಾರ್ಥಿಗಳು ಹಿಂದಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಮರು ಪಡೆಯಲು ಇಚ್ಚಿಸದಿದ್ದಲ್ಲಿ, ಮುಂದಿನ ದಿಗಳಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ನಡೆಸುವ ದ್ವಿತೀಯ ಪಿಯುಸಿ ಪರೀಕ್ಷೆಗೆ ಹಾಜರಾಗುವುದು. ಪರೀಕ್ಷೆಗೆ ಹಾಜರಾಗಲು ಇಚ್ಚಿಸಿದಲ್ಲಿ ವಿದ್ಯಾರ್ಥಿಗಳು ತಮ್ಮ ಕಾಲೇಜು ಪ್ರಾಂಶುಪಾಲರುಗಳ ಮೂಲಕ ನಿಯಮಾನುಸಾರ ಅರ್ಜಿಯನ್ನು ಮುಚ್ಚಳಿಕೆ ಪತ್ರ ಸಹಿತ ಸಲ್ಲಿಸಲು ಅವಕಾಶ ಕಲ್ಪಿಸಿದೆ.ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳಿಗೆ ಈ ಹಿಂದಿನ ಫಲಿತಾಂಶದ ಅಂಕಗಳನ್ನು ಮರುನೀಡಲು ಸಾಧ್ಯವಿರುವುದಿಲ್ಲ ಹಾಗೂ ಪರೀಕ್ಷೆಯಲ್ಲಿ ಪಡೆದ ಅಂಕಗಳೇ ಅಂತಿಮವಾಗಿರುತ್ತದೆ.
ಈ ಸಂಬಂಧ ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ 12-07-2021 ಆಗಿದೆ. ಕಾಲೇಜಿನವರು ಅರ್ಜಿಗಳನ್ನು ಜಿಲ್ಲಾ ಉಪ ನಿರ್ದೇಶಕರ ಕಚೇರಿಗೆ ಸಲ್ಲಿಸಲು ಕೊನೆಯ ದಿನಾಂಕ 15-07-2021 ಆಗಿದೆ. ಉಪ ನಿರ್ದೇಶಕರ ಕಚೇರಿಯಿಂದ ಕೇಂದ್ರ ಕಚೇರಿಗೆ ಸಲ್ಲಿಸಬೇಕಾದ ಕೊನೆಯ ದಿನಾಂಕ 19-07-2021 ಆಗಿದೆ.