ಬೆಂಗಳೂರು: 545 ಪಿಎಸ್‌ಐ ಹುದ್ದೆಗಳ ನೇಮಕಾತಿ ಅಕ್ರಮ ಪ್ರಕರಣ ಬಗೆದಷ್ಟೂ ಆಳ ಎಂಬಂತಾಗಿದ್ದು, ಈ ಅಕ್ರಮ ಬಯಲಿಗೆ ಬಂದಿದ್ದಾದ್ರು ಹೇಗೆ? ಎಂಬ ಕುತೂಹಲಕಾರಿ ಪ್ರಶ್ನೆಗೆ ಉತ್ತರ ಇಲ್ಲಿದೆ.
20 ಅಂಕಕ್ಕೆ ಉತ್ತರ ಬಿಡಿಸಿದ್ದ ಪಿಎಸ್‌ಐ ಪರೀಕ್ಷಾರ್ಥಿ ವೀರೇಶ್ನ OMR ಶೀಟ್ ಹೊರಬಂದಿದ್ದಾದ್ರು ಹೇಗೆ ಗೊತ್ತಾ?ಖುದ್ದು ವೀರೇಶ್ ಸ್ನೇಹಿತನಿಂದಲೇ ಪರೀಕ್ಷೆಯಲ್ಲಿನ ಅಕ್ರಮ ಬಯಲಾಗಿದೆ. ಎಲ್ಲರತೆ ವೀರೇಶ್ ಕೂಡ ಪಿಎಸ್‌ಐ ಪರೀಕ್ಷೆಯನ್ನ ಕಟ್ಟಿ ಎಕ್ಸಾಂಗೆ ಸಿದ್ಧತೆ ಮಾಡಿಕೊಂಡಿದ್ದ. ಕಲಬುರಗಿಯ ಜ್ಞಾನ ಜ್ಯೋತಿ ಶಾಲೆಯ ಸೆಂಟರ್ನಲ್ಲಿ ಪರೀಕ್ಷೆ ಬರೆಯಲು ವೀರೇಶ್ಗೆ ಅವಕಾಶ ಸಿಕ್ಕಿತ್ತು. ಈ ಬಗ್ಗೆ ಮಾಹಿತಿ ತಿಳಿದ ವೀರೇಶ್ನ ಸ್ನೇಹಿತ, ಜ್ಞಾನ ಜ್ಯೋತಿ ಶಾಲೆಯ ಎಕ್ಸಾಂ ಸೆಂಟರ್ ಅನ್ನು ಎಲ್ಲರೂ ಇಷ್ಟಪಟ್ಟು ಹಾಕಿಸಿಕೊಳ್ಳುತ್ತಾರೆ. ಆದ್ರೆ ನಿನ್ನ ಅದೃಷ್ಟಕ್ಕೆ ತಾನಾಗಿಯೇ ಜ್ಞಾನ ಜ್ಯೋತಿ ಶಾಲೆಯ ಸೆಂಟರ್ ಸಿಕ್ಕಿದೆ ಎಂದಿದ್ದ. ಆಗ ವೀರೇಶ್ ಕುತೂಹಲದಿಂದ ಜ್ಞಾನ ಜ್ಯೋತಿ ಸೆಂಟರ್ ಬಗ್ಗೆ ವಿಚಾರಿಸಿದ್ದ. ಆಗ ಪಿಎಸ್‌ಐ ಎಕ್ಸಾಂನಲ್ಲಿ ಹಣ ಕೊಟ್ರೆ ನೌಕರಿ ಸಿಗುತ್ತೆ ಎಂದಿದ್ದ ಸ್ನೇಹಿತ. ಆಗ ಪಿಎಸ್‌ಐ ಆಗೋ ಆಸೆಯಿಂದ ನಾನು ಹಣ ಕೊಡ್ತೇನೆ. ಏನಾದ್ರು ಮಾಡಿ ಪರೀಕ್ಷೆಯಲ್ಲಿ ಪಾಸ್ ಆಗುವಂತೆ ಮಾಡು ಎಂದು ವೀರೇಶ್ ಬೇಡಿಕೊಂಡಿದ್ದ.
ಬಳಿಕ ವೀರೇಶ್ನ ಕೋರಿಕೆಯಂತೆ ಅಕ್ರಮದ ಕಿಂಗ್‌ಪಿನ್ ಬಗ್ಗೆ ಸ್ನೇಹಿತ ಮಾಹಿತಿ ಕೊಟ್ಟಿದ್ದ. ಬಳಿಕ ಕಿಂಗ್ಪಿನ್ನನ್ನು ಭೇಟಿಯಾಗಿದ್ದ ವಿರೇಶ್, 80 ಲಕ್ಷ ರೂ.ಗೆ ಪಿಎಸ್‌ಐ ನೌಕರಿಯ ಡೀಲ್ ಕುದುರಿಸಿದ್ದ. ಒಪ್ಪಂದದಂತೆ ಪರೀಕ್ಷೆಗೂ ಮುನ್ನ ವೀರೇಶ್ 35 ಲಕ್ಷ ಹಣ ಕೊಟ್ಟಿದ್ದ. ಹಣ ಕೊಟ್ಟ ಬಳಿಕ ಎಕ್ಸಾಂನಲ್ಲಿ ಕೇವಲ 20 ಮಾರ್ಕ್ಸ್ ಗೆ ವೀರೇಶ್ ಉತ್ತರ ಬರೆದಿದ್ದ. ಬಳಿಕ ವಿರೇಶ್ಗೆ ಪರೀಕ್ಷೆಯಲ್ಲಿ 121 ಮಾರ್ಕ್ಸ್ ಬಂದಿತ್ತು. ಎಲ್ಲವೂ ಅಂದುಕೊಂಡಂತೆ ಆಯಿತು ಎನ್ನುವಷ್ಟರಲ್ಲಿ ವೀರೇಶ್ ಬಳಿ ಈತನ ಸ್ನೇಹಿತ 5 ಲಕ್ಷ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ. ನೀನು ಪಿಎಸ್‌ಐ ಆಗೋಕೆ ದಾರಿ ಹೇಳಿ ಕೊಟ್ಟವನೇ ನಾನು. ಹಾಗಾಗಿ ಹಣ ಕೊಡು ಎಂದು ಪೀಡಿಸಿದ್ದ. ಆ ವೇಳೆ ವೀರೇಶ್ ಬಳಿ ಅಷ್ಟೊಂದು ಹಣ ಇರಲಿಲ್ಲ. ಹಣ ಕೊಡಲಿಲ್ಲ ಎಂಬ ಸಿಟ್ಟಿಗೆ ವೀರೇಶ್ ಸ್ನೇಹಿತನೇ ಆತನ OMR ಶೀಟ್ ಅನ್ನು ಬೇರೆ ಅಭ್ಯರ್ಥಿಗಳಿಗೆ ಶೇರ್ ಮಾಡಿ ಅಕ್ರಮದ ಬಗ್ಗೆ ಬಾಯ್ಬಿಟ್ಟಿದ್ದ. ಇತರ ಅಭ್ಯರ್ಥಿಗಳು ಸಿಎಂ ಮತ್ತು ಗೃಹ ಸಚಿವರಿಗೆ ದೂರು ನೀಡಿ, ನಮಗೆ ಅನ್ಯಾಯ ಆಗಿದೆ. ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ಅಳಲು ತೋಡಿಕೊಂಡಿದ್ದರು. ತನಿಖೆ ನಡೆಸುವಂತೆ ಸರ್ಕಾರ ಸಿಐಡಿಗೆ ಸೂಚಿಸಿದ್ದು, ಸಿಐಡಿ ಅಧಿಕಾರಿಗಳು ಕಲಬುರಗಿಯ ಚೌಕ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿ ಮೊದಲಿಗೆ ವೀರೇಶ್ನನ್ನು ಬಂಧಿಸಿದ್ದಾರೆ. ವೀರೇಶ್ ಬಂಧನದ ಬಳಿಕ ಅಕ್ರಮದ ಬಗ್ಗೆ ಒಂದೊಂದೇ ಮಾಹಿತಿ ಬಹಿರಂಗವಾಗುತ್ತಿದೆ. ವೀರೇಶ್ನಂತೆ ಹಲವಾರು ಅಭ್ಯರ್ಥಿಗಳು ಕಿಂಗ್ಪಿನ್ಗೆ ಹಣ ನೀಡಿದ್ದರು. ಅಕ್ರಮದಲ್ಲಿ ಬಿಜೆಪಿ ನಾಯಕಿ ದಿವ್ಯಾ ಹಾಗರಗಿಗೂ ಪಾಲು ಸಂದಾಯ ಆಗಿದೆ ಎನ್ನಲಾಗಿದೆ. ಅಕ್ರಮದ ಹೂರಣ ಬಯಲಾಗ್ತಿದ್ದಂತೆ ದಿವ್ಯಾ ಹಾಗರಗಿ ನಾಪತ್ತೆಯಾಗಿದ್ದಾರೆ.
2021ರ ಅಕ್ಟೋಬರ್ 3ರಂದು ನಡೆದ 545 ಎಸ್‌ಐ ನೇಮಕಾತಿಗೆ ರಾಜ್ಯದಲ್ಲಿ 92 ಪರೀಕ್ಷಾ ಕೇಂದ್ರಗಳಲ್ಲಿ ಲಿಖಿತ ಪರೀಕ್ಷೆ ನಡೆದಿದ್ದು, ಜ್ಞಾನಜ್ಯೋತಿ ಸ್ಕೂಲ್ ಕೇಂದ್ರದಲ್ಲಿ ಪರೀಕ್ಷೆ ವೇಳೆ ಅಕ್ರಮ ನಡೆದಿದೆ ಎಂದು ಮೇಲ್ನೋಟಕ್ಕೆ ಸಾಬೀತಾಗಿದೆ. ಬಿಜೆಪಿ ಪ್ರಭಾವಿ ನಾಯಕಿ ದಿವ್ಯಾ ಹಾಗರಿಗೆ ಸೇರಿದ ಸಂಸ್ಥೆ ಇದಾಗಿದ್ದು, ಇವರ ಪತಿ ರಾಜೇಶ್ ಅವರು ಜ್ಞಾನ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷರಾಗಿದ್ದಾರೆ. ರಾಜೇಶ್ರನ್ನು ಸಿಐಡಿ ಪೊಲೀಸರು ಈಗಾಗಲೇ ಬಂಧಿಸಿದ್ದಾರೆ