ಹುಕ್ಕೇರಿ : ಇತ್ತೀಚಿನ ದಿನಗಳಲ್ಲಿ ನಕಲಿ ಪತ್ರಕರ್ತರ ಹಾವಳಿ ಹೆಚ್ಚಾಗಿದ್ದು ಇದರಿಂದ ನೈಜ ಪತ್ರಕರ್ತರು ಮುಜುಗರ ಅನುಭವಿಸುವ ಪ್ರಸಂಗಗಳು ಎದುರಾಗಿವೆ ಎಂದು ನಿವೃತ್ತ ಉಪನ್ಯಾಸಕ ಪ್ರೊ.ಪಿ.ಜಿ.ಕೊಣ್ಣೂರ ಕಳವಳ ವ್ಯಕ್ತಪಡಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ರವಿವಾರ ನಡೆದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಹುಕ್ಕೇರಿ ತಾಲೂಕು ಘಟಕದ ನೂತನ ಪದಾಧಿಕಾರಿಗಳ ಆಯ್ಕೆಯ ಸಮಾರಂಭದಲ್ಲಿ ಅವರು ಮಾತನಾಡಿದರು.
ದೇಶದ ನಾಲ್ಕನೇ ಅಂಗವೆಂದೇ ಗುರುತಿಸಲ್ಪಡುವ ಪತ್ರಿಕಾ ರಂಗದಲ್ಲಿ ನಕಲಿ ಪತ್ರಕರ್ತರು ನುಸುಳುವಿಕೆ ಹೆಚ್ಚಾಗಿದೆ. ಜತೆಗೆ ಯೂಟ್ಯೂಬ್ ಬ್ಲ್ಯಾಕ್ಮೇಲ್ರಗಳ ಕಿರುಕುಳವೂ ಮೀತಿಮೀರಿದ್ದು ವಾಸ್ತವ ಸುದ್ಧಿಗಳ ಬದಲಾಗಿ ವ್ಯಕ್ತಿ ಆಧಾರಿತ ಸುದ್ದಿಗಳಿಗೆ ಹೆಚ್ಚಿನ ಮಹತ್ವ ಸಿಗುತ್ತಿದೆ. ಇದು ಪ್ರಜಾಪ್ರಭುತ್ವ ಮತ್ತು ಪತ್ರಿಕಾರಂಗಕ್ಕೆ ದೊಡ್ಡ ಕಂಟಕ ಎಂದು ಅವರು ಖೇದ ವ್ಯಕ್ತಪಡಿಸಿದರು.
ಪತ್ರಕರ್ತರ ಬದುಕು ತಂತಿಯ ಮೇಲಿನ ನಡಿಗೆಯಂತಾಗಿದೆ. ಕೋವಿಡ್, ನೆರೆಹಾವಳಿಯಂಥ ಸಂಧಿಗ್ದ ಸ್ಥಿತಿಯಲ್ಲಿ ಪತ್ರಕರ್ತರು ತಮ್ಮ ಪ್ರಾಣದ ಹಂಗು ತೊರೆದು ಕೆಲಸ ಮಾಡಿದ್ದಾರೆ. ಜಿಲ್ಲಾಡಳಿತ ಮತ್ತು ಸರ್ಕಾರ ಪತ್ರಕರ್ತರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಅವರು ಹೇಳಿದರು.
ನೂತನ ತಾಲೂಕು ಘಟಕ ಅಧ್ಯಕ್ಷ ರವಿ ಕಾಂಬಳೆ ಮಾತನಾಡಿ, ತಾಲೂಕಿನಲ್ಲಿ ಹೊಸ ಹುರುಪಿನೊಂದಿಗೆ ಹೊಸ ತಂಡ ರಚಿಸಲಾಗಿದ್ದು ಪತ್ರಿಕೆ ಹಂಚುವ ಯುವಕರಿಗೆ ಆರೋಗ್ಯ ನಿಧಿ, ಪತ್ರಕರ್ತರ ಕುಟುಂಬದವರಿಗೆ ವಿಮಾ ಸೌಲಭ್ಯ, ಹೋಬಳಿ ಮಟ್ಟದಲ್ಲಿ ಪ್ರತಿಭಾನ್ವಿತ ಮಕ್ಕಳಿಗೆ ಪ್ರೋತ್ಸಾಹ ಧನ, ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ, ಪತ್ರಿಕಾ ಭವನ ನಿರ್ಮಾಣ ಸೇರಿದಂತೆ ಅನೇಕ ಯೋಜನೆಗಳನ್ನು ಸಾಕಾರಗೊಳಿಸಲು ಪ್ರಾಮಾಣಿಕವಾಗಿ ಶ್ರಮಿಸಲಾಗುವುದು ಎಂದರು.
ನಿಕಟಪೂರ್ವ ಅಧ್ಯಕ್ಷ ಸಂಜು ಮುತಾಲಿಕ, ಜಿಲ್ಲಾ ಪ್ರತಿನಿಧಿಗಳಾದ ಚೇತನ ಹೊಳೆಪ್ಪಗೋಳ, ರಾಜು ಬಾಗಲಕೋಟೆ, ಹಿರಿಯ ಪತ್ರಕರ್ತ ಬಾಬು ಸುಂಕದ ಮಾತನಾಡಿದರು. ಬಸವರಾಜ ಕೊಂಡಿ ನಿರೂಪಿಸಿದರು. ವಿಶ್ವನಾಥ ನಾಯಿಕ ಸ್ವಾಗತಿಸಿದರು. ಸುರೇಶ ಕಿಲ್ಲೇದಾರ ವಂದಿಸಿದರು.
ನೂತನ ಪದಾಧಿಕಾರಿಗಳ ಆಯ್ಕೆ
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಹುಕ್ಕೇರಿ ತಾಲೂಕು ಘಟಕಕ್ಕೆ ನೂತನ ಪದಾಧಿಕಾರಿಗಳ ಆಯ್ಕೆಯು ಅವಿರೋಧವಾಗಿ ನಡೆಯಿತು. ಅಧ್ಯಕ್ಷರಾಗಿ ರವಿ ಕಾಂಬಳೆ, ಕಾರ್ಯದರ್ಶಿಯಾಗಿ ಮಹಾದೇವ ನಾಯಿಕ, ಗೌರವಾಧ್ಯಕ್ಷರಾಗಿ ಪಿ.ಜಿ.ಕೊಣ್ಣೂರ, ಸಂಜು ಮುತಾಲಿಕ, ಉಪಾಧ್ಯಕ್ಷರಾಗಿ ಬಾಬು ಸುಂಕದ, ಸಚಿನ ಕಾಂಬಳೆ, ಮಲ್ಲಿಕಾರ್ಜುನ ಗುಂಡಕಲ್ಲೆ, ಕಾರ್ಯದರ್ಶಿಯಾಗಿ ಬಸವರಾಜ ಕೊಂಡಿ, ಖಜಾಂಚಿಯಾಗಿ ಸಚಿನ ಖೋತ, ನಿರ್ದೇಶಕರಾಗಿ ರಾಮಣ್ಣಾ ನಾಯಿಕ, ರಾಜು ಕುರುಂದವಾಡೆ, ನಂದಕುಮಾರ ಹುಕ್ಕೇರಿ, ಆನಂದ ಬೊಮ್ಮನ್ನವರ, ಶಶಾಂಕ ಮಾಳಿ, ಸಂತೋಷ ಭಾಮನೆ, ಅಪ್ಪು ಹುಕ್ಕೇರಿ ಅವರನ್ನು ಆಯ್ಕೆ ಮಾಡಲಾಯಿತು.