ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ವತಿಯಿಂದ ಕಾನೂನು ಹಾಗೂ ಮಾದ್ಯಮ ಕಾರ್ಯಾಗಾರ
ಬೆಳಗಾವಿ- ಬದಲಾವಣೆ ಜಗದ ನಿಯಮ . ಅದೇ ರೀತಿ ಕಾಲಘಟ್ಟದ ಬದಲಾವಣೆಗೆ ತಕ್ಕಂತೆ ಪತ್ರಿಕೋದ್ಯಮದ ಆದ್ಯತೆ ಕೂಡ ಬದಲಾಗಿದೆ, ಹಿಂದೆ ದೇಶಪ್ರೇಮವೇ ಪತ್ರಿಕೋದ್ಯಮದ ಬಂಡವಾಳವಾಗಿತ್ತು . ಇದೀಗ ಆ ಪ್ರೇಮ ಕಡಿಮೆಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಕಳವಳ ವ್ಯಕ್ತಪಡಿಸಿದರು . ಬೆಳಗಾವಿಯಲ್ಲಿ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ್ದ ಮಾದ್ಯಮ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು , ಮಹಾತ್ಮಾ ಗಾಂಧೀಜಿ ಹಾಗೂ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರು ಕೂಡ ಪತ್ರಕರ್ತರಾಗಿದ್ದವರು.ಸ್ವಾತಂತ್ರ್ಯ ಹೋರಾಟದಲ್ಲಿ ಮಹಾತ್ಮಾ ಗಾಂಧೀಜಿಯವರು ಪತ್ರಿಕೋದ್ಯಮವನ್ನು ಅಸ್ತ್ರವಾಗಿ ಬಳಸಿಕೊಂಡರು . ಇದೇ ರೀತಿ ಸಾಮಾಜಿಕ ಸಮಾನತೆಯನ್ನು ಪತ್ರಿಕೋದ್ಯಮದ ಮೂಲಕವೇ ತಂದರು.ಕಾಂಗ್ರೆಸ್ ರಾಜಕೀಯ ಪಕ್ಷವಲ್ಲ ; ದೇಶದ ಸ್ವಾತಂತ್ರ್ಯಕ್ಕಾಗಿ ಆರಂಭಿಸಲಾಗಿದ್ದ ಕಾಂಗ್ರೆಸ್ ಅನ್ನು ಸ್ವಾತಂತ್ರ್ಯದ ಬಳಿಕ ವಿಸರ್ಜಿಸಬೇಕು ಎಂಬುದು ಮಹಾತ್ಮಾ ಗಾಂಧೀಜಿಯವರ ಆಶಯವಾಗಿತ್ತು . ಅದನ್ನು ತಮ್ಮ ಹರಿಜನ ಪತ್ರಿಕೆಯಲ್ಲಿ ಬರೆದ ಕೊನೆಯ ಸಂಪಾದಕೀಯ ಬರಹದಲ್ಲೂ ವ್ಯಕ್ತಪಡಿಸಿದ್ದರು ಎಂದು ಗೋವಿಂದ ಕಾರಜೋಳ ನೆನಪಿಸಿದರು .
ಹನ್ನೆರಡನೇ ಶತಮಾನದ ಶರಣರು ಕನ್ನಡ ಸಾಹಿತ್ಯಕ್ಕೆ ಶ್ರೇಷ್ಠ ಸ್ಥಾನಮಾನ ತಂದು ಕೊಟ್ಟಿದ್ದಾರೆ.ಪತ್ರಕರ್ತರು ಕೂಡ ಸಾಹಿತಿಗಳೇ . ಕೆಲವರು ವಸ್ತುನಿಷ್ಠ ವರದಿ ಮಾಡಿದರೆ ಕೆಲವರು ಸುದ್ದಿಯನ್ನು ಸೃಷ್ಟಿಸುತ್ತಾರೆ . ಆದರೆ ವಸ್ತುನಿಷ್ಠ ವರದಿಗಾರಿಕೆಯೇ ನಿಜವಾದ ಪತ್ರಿಕಾಧರ್ಮವಾಗಿದೆ . ಪೀತಪತ್ರಿಕೋದ್ಯಮ ಈಗ ಇಲ್ಲವಾಗಿದೆ . ಇಂತಹ ಕಾಲಘಟ್ಟದಲ್ಲಿ ಅನೇಕ ಆಧುನಿಕ ತಂತ್ರಜ್ಞಾನದ ಅನುಕೂಲತೆ ಲಭ್ಯವಿದೆ . ಪತ್ರಿಕಾಧರ್ಮ ಉಳಿಸುವ ಕೆಲಸವನ್ನು ಪತ್ರಕರ್ತರು ಮಾಡಬೇಕು . ನಾಲ್ಕನೇ ಸ್ತಂಭ ಎಂದು ಗುರುತಿಸಲಾಗುವ ಪತ್ರಿಕೋದ್ಯಮಕ್ಕೆ ವಿಶಿಷ್ಟ ಸ್ಥಾನವಿದೆ.ಸತ್ಯ ತಿಳಿಸುವ ಮೂಲ ಜನರ ಜಾಗೃತಿ ಮಾಡುವ ಕೆಲಸವಾಗಬೇಕು . ಅಭಿವೃದ್ಧಿ , ದೇಶದ ಕಲೆ – ಸಾಹಿತ್ಯ , ಸಂಸ್ಕೃತಿ ಪ್ರೋತ್ಸಾಹಿಸುವ ಕೆಲಸವನ್ನು ಪತ್ರಕರ್ತರು ಮಾಡಬೇಕು ಎಂದು ಸಚಿವ ಗೋವಿಂದ ಕಾರಜೋಳ ಕರೆ ನೀಡಿದರು .
ಪತ್ರಕರ್ತರ ಯಾಂತ್ರೀಕೃತ ಜೀವನಶೈಲಿ ಹಾಗೂ ಆಹಾರ ಪದ್ಧತಿಯಿಂದ ಆರೋಗ್ಯ ಸಮಸ್ಯೆಗಳು ಉದ್ಭವಿಸುತ್ತಿವೆ . ಆರೋಗ್ಯದ ಕಡೆ ಗಮನಹರಿಸಬೇಕು ಎಂದು ಸಚಿವ ಕಾರಜೋಳ ಕಿವಿಮಾತು ಹೇಳಿದರು .
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ “ ಮೂರು ವರ್ಷಗಳ ಮುನ್ನೋಟ ” ಕುರಿತ ಕಿರುಪುಸ್ತಿಕೆ ಬಿಡುಗಡೆ ಬಳಿಕ ಮಾತನಾಡಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಘಟಕದ ಅಧ್ಯಕ್ಷರಾದ ಶಿವಾನಂದ ತಗಡೂರ ಅವರು , ಸಂಘದ ಮಾಡಿದ ಮುನ್ನೋಟವನ್ನು ವಿವರಿಸಿದರು .
ಮಹಾತ್ಮಾ ಗಾಂಧೀಜಿಯ ಸತ್ಯಾನ್ವೇಷಣೆಯ ಮಾರ್ಗ ಪತ್ರಿಕೋದ್ಯಮವಾಗಿತ್ತು . ಬಿ.ಆರ್.ಅಂಬೇಡ್ಕರ್ ಅವರ ಹೆಸರಿನಲ್ಲಿ ಪ್ರಶಸ್ತಿ ಆರಂಭಿಸಬೇಕು ಎಂಬುದು ಸಂಘದ ಕನಸಾಗಿತ್ತು . ಇದಕ್ಕೆ ಬಾಗಲಕೋಟೆಯ ಸುಭಾಷ್ ಹೊದ್ದೂರ ಅವರ ಎರಡೂವರೆ ಲಕ್ಷ ನೀಡುವ ಮೂಲಕ ಅಭಿಮಾನವನ್ನು ವ್ಯಕ್ತಪಡಿಸಿದರು.ಅದೇ ರೀತಿ ಮಹಾತ್ಮಾ ಗಾಂಧೀಜಿಯವರ ಹೆಸರಿನಲ್ಲಿ ಪ್ರಶಸ್ತಿ ಆರಂಭಿಸಲು ಸಚಿವ ಗೋವಿಂದ ಕಾರಜೋಳ ಅವರು ಕೂಡ ಸಮ್ಮತಿ ವ್ಯಕ್ತಪಡಿಸಿದ್ದಾರೆ ಎಂದು ತಗಡೂರ ಹೇಳಿದರು .
“ ಮನೆ ಗೆದ್ದು ಮಾರು ಗೆಲ್ಲಬೇಕು ” ಎಂಬ ಮಾತನ್ನು ಅರಿತುಕೊಂಡು ಪತ್ರಕರ್ತರು , ತಮ್ಮ ಕುಟುಂಬವನ್ನು ಗಮನದಲ್ಲಿಟ್ಟುಕೊಂಡು ವೃತ್ತಿಜೀವನವನ್ನು ಮುನ್ನಡೆಸಿಕೊಂಡು ಹೋಗಬೇಕು ಎಂದು ಸಲಹೆ ನೀಡಿದರು.ಸಾಮಾಜಿಕ ಜಾಲತಾಣ ಸಕ್ರಿಯವಾಗಿರುವ ಈ ಸಂದರ್ಭದಲ್ಲಿ ಸುಳ್ಳು ಸುದ್ದಿ ಭರಾಟೆ ಉಂಟಾಗಿದೆ . ಇಂತಹ ಸನ್ನಿವೇಶದಲ್ಲಿ ಪತ್ರಕರ್ತರ ಮೇಲೆ ಹೆಚ್ಚಿನ ಜವಾಬ್ದಾರಿಯಿದೆ.ಕಾರ್ಯಮರೆತ ಸಂಘ ಎಂಬ ಟೀಕೆ ಎದುರಿಸಿದ ಸಂಘ ಇದೀಗ ಕಾರ್ಯನಿರತ ಪತ್ರಕರ್ತರ ಸಂಘ ಎಂಬುದನ್ನು ಸಾಬೀತುಪಡಿಸಿದೆ.ಸಂಘಕ್ಕೆ ಹೊಸರೂಪ ನೀಡಿ ಇದಕ್ಕೆ ಸಾಹಿತ್ಯಕ ಹಾಗೂ ಸಾಂಸ್ಕೃತಿಕ ರೂಪ ನೀಡಲು ಉದ್ದೇಶಿಸಲಾಗಿದೆ . ವೃತ್ತಬದ್ಧತೆಯನ್ನು ಗಮನದಲ್ಲಿಟ್ಟುಕೊಂಡು ಮುನ್ನೋಟವನ್ನು ರೂಪಿಸಲಾಗಿದೆ . ಎಂದು ತಗಡೂರ ಹೇಳಿದರು .
ವಿಜಯಪುರದಲ್ಲಿ ಪತ್ರಕರ್ತರ ರಾಜ್ಯ ಸಮ್ಮೇಳನ ಈ ಬಾರಿಯ ರಾಜ್ಯ ಪತ್ರಕರ್ತರ ಸಮ್ಮೇಳನವನ್ನು ವಿಜಯಪುರ ಜಿಲ್ಲೆಯಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಶಿವಾನಂದ ತಗಡೂರ ತಿಳಿಸಿದರು . ಶಾಸಕರಾದ ಅನೀಲ ಬೆನಕ್ಕೆ ಅಭಯ ಪಾಟೀಲ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ದಿಲೀಪ ಕುರಂದವಾಡೆ , ಹಾಗೂ ಸಂಘದ ರಾಜ್ಯಮಟ್ಟದ ಪದಾಧಿಕಾರಿಗಳು ಮತ್ತು ಬೆಳಗಾವಿ ಜಿಲ್ಲಾ ಪದಾಧಿಕಾರಿಗಳು ಮತ್ತು ನೂರಾರು ಜನ ಪತ್ರಕರ್ತರು ಭಾಗವಹಿಸಿದ್ದರು .