ಹಾವೇರಿ: ಪೋಷಕರೆ ಮಕ್ಕಳ ಕೈಗೆ ಮೊಬೈಲ್ ಕೊಡುವ ಮುನ್ನ ಎಚ್ಚರ ವಹಿಸಿ. ಯಾವಾಗಲೂ ಮೊಬೈಲ್ ನಲ್ಲಿ ಗೇಮ್ ಆಡುವ ಹುಚ್ಚಿಗೆ ಬಿದ್ದ ಬಾಲಕನೊಬ್ಬ ಮೂರು ಬೆರಳನ್ನೇ ಕಳೆದುಕೊಂಡಿದ್ದಾನೆ. ಮೊಬೈಲ್ ಬ್ಲಾಸ್ಟ್ ಆಗಿದ್ದರಿಂದ ಬಾಲಕನ ಬಲಗೈಯಲ್ಲಿನ ಮೂರು ಬೆರಳುಗಳೇ ಕಟ್ ಆಗಿವೆ. ಬ್ಲಾಸ್ಟ್ ಆಗಿದ್ದ ಹೊಡೆತಕ್ಕೆ ಬಾಲಕನ ಮೈಮೇಲೆ ಗಾಯಗಳಾಗಿದ್ದು, ಕಣ್ಣಿಗೆ ಗಂಭೀರ ಸ್ವರೂಪದ ಗಾಯವಾಗಿದೆ. ಮನೆಯಲ್ಲಿ ಚಾರ್ಜ್ ಹಾಕಿದ್ದ ಮೊಬೈಲ್ ನಲ್ಲಿ ಆಟವಾಡುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ.
ಕಾರ್ತಿಕ ಕಲಾದಗಿ ಎಂಬ 10 ವರ್ಷದ ಬಾಲಕ ಮನೆಯಲ್ಲಿ ಆಡವಾಡುತ್ತಿದ್ದ. ಮನೆಯಲ್ಲಿ ಮೊಬೈಲ್ ಚಾರ್ಜ್ ಹಾಕಲಾಗಿದ್ದು, ಚಾರ್ಜ್ ಹಾಕಿದ್ದ ಮೊಬೈಲ್ ನಲ್ಲಿ ಕಾರ್ತಿಕ ಗೇಮ್ ಆಡುತ್ತಿದ್ದನಂತೆ. ಆಗ ಏಕಾಏಕಿ ಮೊಬೈಲ್ ಸ್ಫೋಟಗೊಂಡಿದೆ. ಸ್ಫೋಟದ ರಭಸಕ್ಕೆ ಬಾಲಕನ ಬಲಗೈಯಲ್ಲಿನ ಮೂರು ಬೆರಳುಗಳು ಕಟ್ ಆಗಿವೆ.
ಅಲ್ಲದೆ ಎದೆಯ ಭಾಗಕ್ಕೆ ಅಲ್ಲಲ್ಲಿ ಗಾಯಗಳಾಗಿವೆ. ಸ್ಫೋಟದಿಂದ ಮುಖಕ್ಕೂ ಗಾಯಗಳಾಗಿದ್ದು, ಬಲಗಣ್ಣಿಗೂ ಗಾಯವಾಗಿದೆ. ಗಾಯಾಳು ಬಾಲಕನನ್ನ ಸವಣೂರು ತಾಲೂಕು ಸರಕಾರಿ ಆಸ್ಪತ್ರೆಯ ತೀವ್ರನಿಗಾ ಘಟಕದಲ್ಲಿ ಇರಿಸಲಾಗಿದ್ದು, ಚಿಕಿತ್ಸೆ ನೀಡಲಾಗ್ತಿದೆ ಎಂದು ಬಾಲಕನ ಸಂಬಂಧಿ ಭರಮಣ್ಣ ಕಲಾದಗಿ ತಿಳಿಸಿದ್ದಾರೆ. ಸ್ಪೋಟದ ರಭಸದಿಂದ ಬೆಚ್ಚಿ ಬಿದ್ದಿರೋ ಬಾಲಕ ಕಾರ್ತಿಕನ ಮನೆಯವರು ತಕ್ಷಣವೇ ತಾಲೂಕು ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮೊಬೈಲ್ ಸ್ಫೋಟದ ಸುದ್ದಿ ಕೇಳಿ ಪಕ್ಕದ ಮನೆಯವರು ಗಾಬರಿಗೊಂಡಿದ್ದಾರೆ. ಆರಂಭದಲ್ಲಿ ಬಾಲಕನ ಮನೆಯವರು ಮನೆಯ ಪಕ್ಕದಲ್ಲಿ ಬಿದ್ದಿದ್ದ ಹಾಳಾದ ಮೊಬೈಲ್ ಬ್ಯಾಟರಿ ಸ್ಫೋಟಗೊಂಡಿದೆ ಅಂತಲೆ ಭಾವಿಸಿದ್ರು. ನಂತರ ಮೊಬೈಲ್ ಚಾರ್ಜ್ ಹಾಕಿದ್ದ ಸ್ಥಳದಲ್ಲಿ ನೋಡಿದಾಗ ಮತ್ತು ಬಾಲಕ ಕಾರ್ತಿಕ ನೀಡಿದ ಮಾಹಿತಿ ಮೇರೆಗೆ ಮೊಬೈಲ್ ಚಾರ್ಜ್ ಇಟ್ಟಿದ್ದ ವೇಳೆ ಅದ್ರಲ್ಲಿ ಆಟವಾಡ್ತಿದ್ದಾಗ ಈ ದುರ್ಘಟನೆ ನಡೆದಿದೆ ಎಂದು ಗೊತ್ತಾಗಿದೆ.
ತೀವ್ರವಾಗಿ ಗಾಯಗೊಂಡಿರೋ ಬಾಲಕನಿಗೆ ಸದ್ಯ ತಾಲೂಕು ಸರಕಾರಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗ್ತಿದೆ. ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರೆಫರ್ ಮಾಡಲಾಗ್ತಿದೆ. ಆದ್ರೆ ಸ್ಫೋಟದ ರಭಸಕ್ಕೆ ಬಾಲಕನ ಮೂರು ಬೆರಳುಗಳು ಕಟ್ ಆಗಿದೆ. ಮಕ್ಕಳಿಗೆ ಮೊಬೈಲ್ ನೀಡೋವಾಗ ಅಥವಾ ಮಕ್ಕಳು ಮೊಬೈಲ್ನಲ್ಲಿ ಆಟವಾಡುವಾಗ ಎಚ್ಚರ ವಹಿಸಬೇಕಿದೆ. ಮಕ್ಕಳ ಕೈಗೆ ಮೊಬೈಲ್ ಸಿಗದಂತೆ ಎಚ್ಚರ ವಹಿಸಬೇಕಿದೆ.
ಇತ್ತೀಚಿನ ದಿನಗಳಲ್ಲಿ ಮೊಬೈಲ್ ಬಿಟ್ರೆ ಬೇರೇನೂ ಗೊತ್ತಿಲ್ಲ ಅನ್ನೋ ಹಾಗೆ ಮಕ್ಕಳು ಮೊಬೈಲ್ಗೆ ಅಡಿಕ್ಟ್ ಆಗಿದ್ದಾರೆ. ಸ್ವಲ್ಪ ಹೊತ್ತೂ ಮಕ್ಕಳು ಮೊಬೈಲ್ ಬಿಟ್ಟಿರಲಾರದ ಸ್ಥಿತಿಗೆ ತಲುಪಿದ್ದಾರೆ. ಹೀಗಾಗಿ ಮೊಬೈಲ್ ನಿಂದ ಮಕ್ಕಳು ಪದೇ ಪದೇ ಅನಾಹುತಗಳಿಗೆ ಈಡಾಗ್ತಿದ್ದಾರೆ. ಮಕ್ಕಳ ಕೈಗೆ ಮೊಬೈಲ್ ಸಿಗದಂತೆ ಮಕ್ಕಳ ಪೋಷಕರು ಎಚ್ಚರ ವಹಿಸಬೇಕಿದೆ. ಆಗ ಮಾತ್ರ ಮೊಬೈಲ್‌ನಿಂದ ಆಗೋ ಅನಾಹುತಗಳನ್ನ ತಪ್ಪಿಸಬಹುದಾಗಿದೆ.