ನವದೆಹಲಿ : (PFI Ban) ಕೇಂದ್ರ ಸರ್ಕಾರವು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI ) ಮತ್ತು ಅದರ ಸಹವರ್ತಿ ಹಾಗೂ ಅಂಗಸಂಸ್ಥೆಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಕಾನೂನು ಬಾಹಿರ ಸಂಘಟನೆ ಎಂದು ಘೋಷಿಸಿದ್ದು, ಕೇಂದ್ರ ಸರಕಾರ ಮೂಲಗಳ ಮಾಹಿತಿಯನ್ನು ಆಧರಿಸಿ ಸುದ್ದಿಸಂಸ್ಥೆ ಎನ್‌ಐಎ ಟ್ವೀಟ್ ಮಾಡಿದೆ.
ದೇಶದಲ್ಲಿ ನಡೆದಿರುವ ಹಲವು ಹಿಂಸಾಚಾರ, ಭಯೋತ್ಪಾದಕ ಸಂಘಟನೆಗಳನ್ನು ಬೆಂಬಲಿಸಿದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 22 ರಂದು, ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) 15 ರಾಜ್ಯಗಳಲ್ಲಿ ಪಿಎಫ್‌ಐನ 106 ನಾಯಕರು ಮತ್ತು ಕಾರ್ಯಕರ್ತರನ್ನು ಬಂಧಿಸಿತ್ತು.
ಪಿಎಫ್‌ಐಗೆ ಸಂಬಂಧಿಸಿದ 19 ಪ್ರಕರಣಗಳನ್ನು ಎನ್‌ಐಎ ತನಿಖೆ ನಡೆಸುತ್ತಿದೆ. ಈ ದಾಳಿಯ ಬೆನ್ನಲ್ಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ವಿವಿಧ ಭದ್ರತಾ ಏಜೆನ್ಸಿಗಳ ಮುಖ್ಯಸ್ಥರ ಜೊತೆ ಮಹತ್ವದ ಸಭೆಯನ್ನು ನಡೆಸಿದ್ದಾರೆ. ಉದಯ್‌ಪುರ್, ಅಮರಾವತಿಯಲ್ಲಿ ಶಿರಚ್ಚೇಧ ಪ್ರಕರಣ ಅಪರಾಧಿಗಳ ಜೊತೆಗೆ ಪಿಎಫ್‌ಐ ನಂಟು ಹೊಂದಿರುವುದು ಬೆಳಕಿಗೆ ಬಂದ ಬೆನ್ನಲ್ಲೇ ಕೇಂದ್ರ ಸರಕಾರ ಪಿಎಫ್‌ಐ ವಿರುದ್ದ ಕಠಿಣ ನಿರ್ಧಾರವನ್ನು ಕೈಗೊಂಡಿದೆ.ಕೇಂದ್ರ ಸರಕಾರ ಪಿಎಫ್‌ಐ ಸಂಘಟನೆಯನ್ನು ಐದು ವರ್ಷಗಳ ಅವಧಿಗೆ ನಿಷೇಧ ಹೇರ ಆದೇಶವನ್ನು ಹೊರಡಿಸಿದೆ.