ಬೆಂಗಳೂರು, ಮೇ 21: ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸುಂಕವನ್ನು ಕಡಿಮೆ ಮಾಡಿರುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರ ಸಂಜೆ ಘೋಷಿಸಿದ್ದಾರೆ. ಈ ಮಧ್ಯೆ ಕೇಂದ್ರ ಸರ್ಕಾರದ ಈ ಘೋಷಣೆಯಿಂದ ಕರ್ನಾಟಕದಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಾಗಲಿದೆ ಎಂಬ ವಿಷಯ ರಾಜ್ಯದ ವಾಹನ ಸವಾರರನ್ನು ಕಾಡುತ್ತಿದೆ.ಕೇಂದ್ರ ಸರಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕಗಳನ್ನು ಇಳಿಕೆ ಮಾಡಿದೆ. ಪೆಟ್ರೋಲ್ ಮೇಲಿನ ಅಬಕಾರಿ ಸುಂಕದಲ್ಲಿ 8 ರೂ, ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕದಲ್ಲಿ 6ರೂ. ಇಳಿಕೆ ಮಾಡಿದೆ.
ಇದರೊಂದಿಗೆ ನಿರಂತರ ಪೆಟ್ರೋಲ್ ಬೆಲೆ ಏರಿಕೆಯಿಂದ ಕಂಗೆಟ್ಟಿದ್ದ ಜನಸಾಮಾನ್ಯ ಸ್ವಲ್ಪ ನಿಟ್ಟುಸಿರು ಬಿಡುವಂತಾಗಿದೆ. ಕೇಂದ್ರದ ಅಬಕಾರಿ ಸುಂಕ ಕಡಿತದಿಂದ ಪೆಟ್ರೋಲ್ ಬೆಲೆ ಲೀಟರ್‌ಗೆ 9.5 ರೂ ಕಡಿಮೆ ಆಗಲಿದೆ. ಡೀಸೆಲ್ ಬೆಲೆಯಲ್ಲಿ 7 ರೂ ಇಳಿಕೆ ಆಗುತ್ತದೆ.
ಮೇ 21ರಂದು ಶನಿವಾರ ಬೆಂಗಳೂರು ನಗರದಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 111.09 ರೂ. ಹಾಗೂ ಡೀಸೆಲ್ ಬೆಲೆ ಲೀಟರ್‌ಗೆ 94.79 ರೂಪಾಯಿ ಇತ್ತು. ಕೇಂದ್ರ ಸರ್ಕಾರದ ಸುಂಕ ಇಳಿಕೆ ನಿಯಮ ಶನಿವಾರ ಮಧ್ಯರಾತ್ರಿಯಿಂದಲೇ ಅನ್ವಯ ಆಗುತ್ತದೆ.
ಭಾನುವಾರದಿಂದ ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 101.59 ರೂಪಾಯಿ ಹಾಗೂ ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 87.79 ರೂ. ಆಗುತ್ತದೆ ಎಂದು ನಗರದ ಪೆಟ್ರೋಲ್ ಬಂಕ್‌ಗಳ ಮಾಲೀಕರು ಪ್ರಾಥಮಿಕ ಮಾಹಿತಿ ನೀಡಿದ್ದಾರೆ.
ಈ ಮಧ್ಯೆ ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್‌ಗಳ ಮೇಲಿನ ಸುಂಕ ಇಳಿಕೆ ಮಾಡಿರುವುದರಿಂದ ರಾಜ್ಯ ಸರ್ಕಾರಗಳೂ ಸಹ ತನ್ನ ಸುಂಕಗಳನ್ನು ಇಳಿಕೆ ಮಾಡಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಯಾವ ನಿರ್ಧಾರ ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕು.