ಕಲಬುರ್ಗಿ: ತಾಲೂಕಿನ ಶರಣಶಿರಸಗಿ ಗ್ರಾಪಂ ನಲ್ಲಿ ನಡೆಯುತ್ತಿದ್ದ ಅವ್ಯವಹಾರವನ್ನು ಬಯಲಿಗೆಳೆಯಲು ಹೋದ ಸುದ್ದಿ ವಾಹಿನಿಯೊಂದರ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಆರೋಪಿಗಳನ್ನು ಬಂಧಿಸಬೇಕು’ ಎಂದು ಭೀಮ್ ಆರ್ಮಿ ಮತ್ತು ಅಂಬೇಡ್ಕರ್ ಯುವಸೇನೆ ಸಂಘಟನೆಗಳ ಮುಖಂಡರು ಒತ್ತಾಯಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂಬೇಡ್ಕರ್ ಯುವಸೇನೆ ಅಧ್ಯಕ್ಷ ಮಲ್ಲಿಕಾರ್ಜುನ ತಳಕೇರಿ, ‘ಪಂಚಾಯಿತಿ ಕಂಪ್ಯೂಟರ್ ಆಪರೇಟರ್ ಮತ್ತು ಕುಟುಂಬದವರು ಸೇರಿಕೊಂಡು ನ್ಯೂಸ್ ಫಸ್ಟ್ ಕನ್ನಡ ವಾಹಿನಿಯ ವರದಿಗಾರ ಮತ್ತು ಕ್ಯಾಮೆರಾಮನ್ ಮೇಲೆ ನ. 21ರಂದು ಹಲ್ಲೆ ನಡೆಸಿದ್ದಾರೆ. ಈ ಕಂಪ್ಯೂಟರ್ ಆಪರೇಟರ್ ಬಸವ ವಸತಿ ಯೋಜನೆ ಮತ್ತು ನರೇಗಾ ಕಾರ್ಯಕ್ರಮದಡಿ ಹಣ ಲೂಟಿ ಮಾಡಿದ್ದಾರೆ. ಈ ಬಗ್ಗೆ ಗ್ರಾಮಸ್ಥರು ನೀಡಿದ ದೂರಿನ ಮೇರೆಗೆ ಸತ್ಯಾಸತ್ಯತೆ ವರದಿ ಮಾಡಲು ಹೋದಾಗ ಘಟನೆ ನಡೆದಿದೆ’ ಎಂದರು.
‘ಬಸವ ವಸತಿ ಯೋಜನೆಯಲ್ಲಿ ಮನೆ ಕಟ್ಟದೇ ನೆರವಿನ ಹಣ ದುರುಪಯೋಗ ಮಾಡಿಕೊಂಡಿದ್ದಾರೆ. ಅಲ್ಲದೇ, ತಮ್ಮ ಸಂಬಂಧಿಕರಾದ ಒಂದೇ ಕುಟುಂಬದ 7 ಮಂದಿಗೆ ಮನೆ ಮಂಜೂರಾಗುವಂತೆ ಮಾಡಿ ಹಣ ಬಳಸಿಕೊಂಡಿದ್ದಾರೆ. ಇನ್ನೊಂದು ಪ್ರಕರಣದಲ್ಲಿ, ಒಬ್ಬರಿಗೇ ಎರಡು ಬಾರಿ ಮನೆ ಹಂಚಿಕೆ ಮಾಡಿ ಖೊಟ್ಟಿ ದಾಖಲೆ ಸೃಷ್ಟಿಸಿ ಅಕ್ರಮ ಎಸಗಿದ್ದಾರೆ. ಇದಕ್ಕೆ ಗ್ರಾಮದ ಪಿಡಿಒ ಕೂಡ ಸಹಕಾರ ನೀಡಿದ್ದಾರೆ. ಫಲಾನುಭವಿಗಳ ಆಯ್ಕೆಗೆ ಗ್ರಾಮಸಭೆ ಕೂಡ ನಡೆಸಿಲ್ಲ’ ಎಂದು ಅವರು ದೂರಿದರು.
‘ಈ ಹಿಂದೆ ಕೂಡ ಕಂಪ್ಯೂಟರ್ ಆಪರೇಟರ್ ಕಡೆಯವರು ಸಹಾಯಕ ಎಂಜಿನಿಯರ್ ಒಬ್ಬರ ಮೇಲೆ ಹಲ್ಲೆ ನಡೆಸಿದ್ದರು. ಈ ಬಗ್ಗೆ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಎರಡೂ ಪ್ರಕರಣಗಳನ್ನು ತನಿಖೆ ನಡೆಸಿ, ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು’ ಎಂದು ಅವರು ಪೋಲೀಸರಿಗೆ ಮನವಿ ಮಾಡಿದರು.
ಭೀಮ್ ಆರ್ಮಿ ಜಿಲ್ಲಾ ಘಟಕದ ಅಧ್ಯಕ್ಷ ಸಂತೋಷ ಪಾಳಾ, ಅರುಣ ಭರಣಿ ಇದ್ದರು.