ಗೋಕಾಕ : ಬುದ್ಧಿವಾದ ಹೇಳಿದ್ದಕ್ಕೆ ದೊಡ್ಡಪ್ಪನ ಮಗನನ್ನೇ ಚಾಕುವಿನಿಂದ ಇರಿದು ಕೊಲೆಗೈದಿದ್ದ ಆರೋಪಿಗೆ ಇಲ್ಲಿನ 12ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಲಯವು 10 ವರ್ಷ ಜೈಲುಶಿಕ್ಷೆ ಮತ್ತು ₹1.10 ಲಕ್ಷ ದಂಡ ವಿಧಿಸಿ ಬುಧವಾರ ತೀರ್ಪು ನೀಡಿದೆ.
ಗೋಕಾಕ ಫಾಲ್ಸ್‌ನ ತಿಲಕ ರೂಪೇಶ ಪರಮಾರ (19) ಶಿಕ್ಷೆಗೆ ಗುರಿಯಾದವ.ಚೇತನ ರಾಕೇಶ ಪರಮಾರ (24) ಕೊಲೆಗೀಡಾದವರು.
ಗೋಕಾಕ ಮಿಲ್ಸ್ ಒಡೆತನದ ಶೌಚಾಲಯದ ಸ್ವಚ್ಛತೆ ಕೆಲಸದ ಗುತ್ತಿಗೆಯನ್ನು ಬಿಟ್ಟುಕೊಡಲು ಚೇತನ ಒಪ್ಪಿರಲಿಲ್ಲ. ಜತೆಗೆ, ತಿಲಕ ಅವರ ಸಹೋದರ ಗೌತಮ ಅವರಿಗೆ ಮದ್ಯಪಾನ ಮತ್ತು ಧೂಮಪಾನ ಮಾಡುವಂತೆ ಪುಸಲಾಯಿಸುತ್ತಿದ್ದ. ಇದರಿಂದ ಸಿಟ್ಟಾದ ತಿಲಕ, ‘ನಿನ್ನಂತೆ ನನ್ನ ತಮ್ಮನಿಗೂ ದುಶ್ಚಟ ಕಲಿಸಬೇಡ’ ಎಂದು ಬುದ್ಧಿವಾದ ಹೇಳಿದ್ದ. ಇದನ್ನು ತಪ್ಪಾಗಿ ಅರ್ಥೈಸಿಕೊಂಡ ಚೇತನ ವಿನಾಕಾರಣ ಜಗಳ ತೆಗೆದಾಗ, ಕೊಲೆಗೈದ ಘಟನೆಯು 2023ರ ಜ.24ರಂದು ರಾತ್ರಿ ನಡೆದಿತ್ತು.
ಗೋಕಾಕ ಸಿಪಿಐ ಗೋಪಾಲ ರಾಠೋಡ ಅವರು, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶ ತಾರಕೇಶ್ವರಗೌಡ ಪಾಟೀಲ ತೀರ್ಪು ಕೊಟ್ಟಿದ್ದಾರೆ. ಸರ್ಕಾರದ ಪರವಾಗಿ ಅಭಿಯೋಜಕ ಸುನೀಲ ಎಂ. ಹಂಜಿ ವಾದ ಮಂಡಿಸಿದ್ದರು.